ಉಳ್ಳಾಲ: ಭೂಗತ ಪಾತಕಿ ರವಿ ಪೂಜಾರಿ ಮತ್ತು ಕಲಿ ಯೋಗೇಶನ ಸಹಚರ,ಜಿಲ್ಲೆಯ ಹಲವು ಠಾಣೆಗಳಲ್ಲಿ ಬಂಧನ ವಾರಂಟ್ ಎದುರಿಸುತ್ತಿದ್ದ ನಟೋರಿಯಸ್ ಶಾರ್ಪ್ ಶೂಟರ್ ಕೇರಳದ ಮಂಜೇಶ್ವರ, ಪೈವಳಿಕೆ ನಿವಾಸಿ ಮೊಹಮ್ಮದ್ ಹನೀಫ್ ಯಾನೆ ಅಲಿ ಮುನ್ನಾನನ್ನು ಮಂಗಳೂರು ದಕ್ಷಿಣ ಉಪವಿಭಾಗ ಎಸಿಪಿ ಧನ್ಯಾ ನಾಯಕ್ ನೇತೃತ್ವದ ತಂಡ ಬಂಧಿಸಿದೆ.
ನಟೋರಿಯಸ್ ಶಾರ್ಪ್ ಶೂಟರ್ ಹನೀಫ್ ಯಾನೆ ಅಲಿ ಮುನ್ನ ಭೂಗತ ಪಾತಕಿ ರವಿಪೂಜಾರಿಯ ಕೃತ್ಯಗಳಿಗೆ ಕರಾವಳಿಯ ಪ್ರತಿನಿಧಿಯಾಗಿದ್ದು ಹಲವು ಶೂಟೌಟ್, ದರೋಡೆ, ಬೆದರಿಕೆ ಪ್ರಕರಣದಲ್ಲಿ ರಾಜ್ಯದ ಅನೇಕ ಠಾಣೆಗಳಿಂದ ಬಂಧನ ವಾರಂಟ್ ಎದುರಿಸುತ್ತಿದ್ದ. ಈತನ ವಿರುದ್ಧ ಕೊಣಾಜೆ, ಮಂಗಳೂರು ಉತ್ತರ,ಪುತ್ತೂರು,ಬರ್ಕೆ, ವಿಟ್ಲ, ಉಳ್ಳಾಲ,ಬೆಂಗಳೂರು ವಿಮಾನ ನಿಲ್ದಾಣ ಠಾಣೆಯಲ್ಲಿ ಪ್ರಕರಣಗಳಿದ್ದು, 2010 ಮತ್ತು 2013 ಕಾಸರಗೋಡು ಬೇವಿಂಜ ಪಿಡಬ್ಲ್ಯುಡಿ ಗುತ್ತಿಗೆದಾರರ ಶೂಟೌಟ್ ಪ್ರಕರಣ,ಮಂಜೇಶ್ವರದಲ್ಲಿ ಕಳ್ಳತನ, ಕುಂಬಳೆ ಹಾಗೂ ವಿದ್ಯಾನಗರ ಠಾಣೆಯಲ್ಲೂ ಪ್ರಕರಣಗಳು ದಾಖಲಾಗಿತ್ತು.ಮಂಗಳೂರು ಉತ್ತರ ಠಾಣಾ ವ್ಯಾಪ್ತಿಯ ಸಂಜೀವ ಸಿಲ್ಕ್ಸ್ ಮಳಿಗೆ ಮತ್ತು ಪುತ್ತೂರು ರಾಜಧಾನಿ ಜ್ಯುವೆಲ್ಲರ್ಸ್ ನಲ್ಲಿ ಈತ ನಡೆಸಿದ ಶೂಟೌಟ್ ಪ್ರಕರಣ ಜಿಲ್ಲೆಯಲ್ಲಿ ಸದ್ದು ಮಾಡಿತ್ತು.ಕರ್ನಾಟಕದಲ್ಲಿ ರವಿ ಪೂಜಾರಿಯ ಅಂಡರ್ ವರ್ಲ್ಡ್ ಮಾಫಿಯಾವನ್ನು ಅಲಿ ಮುನ್ನ ಮತ್ತು ಮನೀಷ್ ಕಂಟ್ರೋಲ್ ಮಾಡುತ್ತಿದ್ದರು.ಕರಾವಳಿಯ ಭೂಗತ ವ್ಯವಹಾರವನ್ನು ಅಲಿ ಮುನ್ನನೇ ನಿರ್ವಹಿಸುತ್ತಿದ್ದ.ಕಾರ್ಕಳದ ಕಿಶನ್ ಹೆಗ್ಡೆ ಕೊಲೆಗೆ ಪ್ರತೀಕಾರವಾಗಿ ಕೋಡಿಕೆರೆ ಮನೋಜ್ ಗ್ಯಾಂಗಿನಿಂದ ಬೆಂಗಳೂರಲ್ಲಿ ಮನೀಷ್ ಕೊಲೆಯಾಗಿದ್ದ.ಆಪ್ತ ಸಹಚರ ಮನೀಷ್ ಕೊಲೆಯಾದ ನಂತರ ಅಲಿ ಮುನ್ನ ಕಂಗಾಲಾಗಿ ಮುಂಬೈ,ಬೆಂಗಳೂರಲ್ಲೇ ತಲೆಮರೆಸಿ ಜೀವಿಸುತ್ತಿದ್ದ.ಈಗಲೂ ಹಫ್ತಾ ವಸೂಲಿಯಲ್ಲಿ ತೊಡಗಿಸಿಕೊಂಡಿದ್ದ ಅಲಿ ಮುನ್ನನನ್ನ ಎಸಿಪಿ ಧನ್ಯ ನಾಯಕ್ ನೇತೃತ್ವದ ತಂಡ ಮತ್ತು ಕೊಣಾಜೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಕೇರಳದಲ್ಲಿ ಬಂಧಿಸಿ ಜೈಲಿಗಟ್ಟಿದ್ದಾರೆ.