ಸುರತ್ಕಲ್: ಬಂಟರ ಸಂಘ (ರಿ.) ಸುರತ್ಕಲ್ ಮತ್ತು ಮಹಿಳಾ ವೇದಿಕೆ, ಬಂಟರ ಸಂಘ ಸುರತ್ಕಲ್ ಸಹಯೋಗದಲ್ಲಿ ಆಟಿದ ಪೊರ್ಲು ಮತ್ತು ಅಭಿನಂದನಾ ಕಾರ್ಯಕ್ರಮ ಬಂಟರ ಸಂಘದ ಸಭಾಭವನದಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಂಟರ ಸಂಘದ ಮಾಜೀ ಅಧ್ಯಕ್ಷ ಎಂ. ದೇವಾನಂದ ಶೆಟ್ಟಿ ಮಾತನಾಡಿ “ಆಟಿ ತಿಂಗಳು ತುಳುವರಲ್ಲಿ ಅತ್ಯಂತ ಭಿನ್ನವಾದುದು. ನಮ್ಮ ಪೂರ್ವಜರು ಆಟಿ ತಿಂಗಳನ್ನು ಕಷ್ಟದಿಂದ ಕಳೆಯುತ್ತಿದ್ದರು. ಇಂದಿನ ಕಾಲದಲ್ಲೂ ಯುವಜನತೆ ಆಟಿ ತಿಂಗಳ ಆಚರಣೆ, ಸಂಪ್ರದಾಯವನ್ನು ಮರೆಯದೆ ಇರುವುದು ಶ್ಲಾಘನೀಯ” ಎಂದರು.
ಶಾಸಕ ಉಮಾನಾಥ್ ಕೋಟ್ಯಾನ್ ಅವರು, “ಆಟಿ ತಿಂಗಳ ಕಷ್ಟ, ವಿಶೇಷವಾದ ತಿಂಡಿ ತಿನಿಸು, ನಮ್ಮ ಹಿರಿಯರ ನೆನಪು ಎಲ್ಲವೂ ಸದಾ ನೆನಪಲ್ಲಿ ಉಳಿಯುವಂತದ್ದು. ಅದನ್ನು ಇಂದು ಮಾತ್ರವಲ್ಲ ಮುಂದಿನ ಪೀಳಿಗೆಯ ಮಕ್ಕಳೂ ಕೂಡಾ ತಿಳಿಯುವಂತಾಗಬೇಕು. ಆಟಿ ತಿಂಗಳ ತುಳುನಾಡಿನ ಆಚರಣೆಗಳು ಮುಂದಿನ ತಲೆಮಾರಿಗೂ ಹೀಗೆಯೇ ಉಳಿಯಬೇಕು” ಎಂದರು.
ಪುತ್ತೂರು ಶಾಸಕ ಅಶೋಕ್ ರೈ ಮಾತನಾಡಿ “ಬಂಟರ ಸಮಾಜ ಬಲಿಷ್ಠವಾದ ಸಮಾಜವಾಗಿದೆ. ಸಾಮಾಜಿಕವಾಗಿ ಗುರುತಿಸಲ್ಪಡುತ್ತಿರುವ ಬಂಟರ ಸಮಾಜ ಆಟಿದ ಪೊರ್ಲು ಎನ್ನುವಂತಹ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸುರತ್ಕಲ್ ಬಂಟರ ಸಂಘವನ್ನು ಅಭಿನಂದಿಸುತ್ತೇನೆ” ಎಂದರು. “ರಾಜ್ಯ ಸರಕಾರ ಚುನಾವಣೆ ಪೂರ್ವ ಪ್ರಣಾಳಿಕೆಯಲ್ಲಿ ಬಂಟ ಸಮಾಜಕ್ಕೆ 250 ಕೋಟಿ ರೂ ಮೀಸಲಿಟ್ಟಿದೆ. ಸಮಾಜದ ಪ್ರಮುಖರು ಬಂಟ ನಿಗಮ ಸ್ಥಾಪನೆಗೆ ಇತ್ತಾಯಿಸಬೇಕಾದ ಅಗತ್ಯವಿದೆ” ಎಂದರು.
ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ. ಮಾತನಾಡಿ, “ಕೃಷಿ ವಿಷಯಕ್ಕೆ ನಾವು ಹೆಚ್ಚಿನ ಒತ್ತು ಕೊಡಬೇಕಾದ ಅಗತ್ಯವಿದೆ. ಎಲ್ಲರೂ ಇಂಜಿನಿಯರ್ ಗಳಾದಲ್ಲಿ ತಿನ್ನಲು ಏನೂ ಸಿಗಲಿಕ್ಕಿಲ್ಲ. ಹೀಗಾಗಿ ಕೃಷಿ ಸಂಪ್ರದಾಯವನ್ನು ನಮ್ಮ ಬಂಟ ಸಮಾಜ ಬಿಡಬಾರದು. ಸುರತ್ಕಲ್ ಬಂಟರ ಸಂಘ ಇತರ ಸಮಾಜವನ್ನು ಜೊತೆಗೆ ಕರೆದೊಯ್ಯುವ ಕೆಲಸ ಮಾಡುತ್ತಿದೆ. ನೊಂದವರ ಕಣ್ಣೀರು ಒರೆಸುವ ಸಮಾಜಮುಖಿ ಕೆಲಸ ಮಾಡುತ್ತಾ ಬಂದಿದೆ. ಇದಕ್ಕಾಗಿ ಅಭಿನಂದನೆ ಸಲ್ಲಿಸಬೇಕು” ಎಂದರು.
ವೇದಿಕೆಯಲ್ಲಿ ಕುವೆಂಪು ವಿಶ್ವವಿದ್ಯಾನಿಲಯ ಶಿವಮೊಗ್ಗದಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಡಾ.ಎ. ಸದಾನಂದ ಶೆಟ್ಟಿ ರವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತಾಡಿದ ಅವರು, “ಬಿರುದು, ಸನ್ಮಾನದಿಂದ ಜವಾಬ್ದಾರಿ ಹೆಚ್ಚುತ್ತದೆ ಎನ್ನುವುದು ನನ್ನ ಭಾವನೆ. ನನ್ನನ್ನು ಇಲ್ಲಿಗೆ ಕರೆಸಿ ಗೌರವಿಸಿದ ಸುರತ್ಕಲ್ ಬಂಟರ ಸಂಘಕ್ಕೆ ಚಿರಋಣಿಯಾಗಿದ್ದೇನೆ. ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಸಂಘಟನೆ ಇನ್ನಷ್ಟು ಬೆಳೆದು ಹೆಮ್ಮರವಾಗಲಿ” ಎಂದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ “ಬಂಟರ ಸಮಾಜ ಬೇರೆ ಸಮಾಜಕ್ಕೆ ಮಾದರಿಯಾಗಿ ಬೆಳೆದಿದೆ. ನಾವು ಬಂಟ ನಿಗಮ ಬೇಕೆಂದು ಕೇಳುತ್ತಲೇ ಬಂದಿದ್ದೇವೆ. ಸದನದಲ್ಲಿ ಪುತ್ತೂರು ಶಾಸಕರು ಕೂಡಾ ಆ ಬಗ್ಗೆ ಧ್ವನಿ ಎತ್ತಿರುವುದು ಸಂತೋಷದ ವಿಷಯ. ಸರಕಾರ ನೀಡಿರುವ ಭರವಸೆಯನ್ನು ಕೂಡಲೇ ಈಡೇರಿಸಬೇಕು ಎಂದರು.
ಆಟಿ ಆಚರಣೆ ಕುರಿತು ಉಪನ್ಯಾಸಕಿ ಜಯಲಕ್ಷ್ಮಿ ಆರ್. ಶೆಟ್ಟಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯದ ಪ್ರಭಾರ ಮುಖ್ಯಸ್ಥೆ ಡಾ. ಸಾಯಿಗೀತಾ ಹೆಗ್ಡೆ, ಪತ್ರಕರ್ತ ಹಿರಿಯ ರಂಗಕರ್ಮಿ ಪರಮಾನಂದ ಸಾಲ್ಯಾನ್, ಸಂಗೀತ ನಿರ್ದೇಶಕ ಸತೀಶ್ ಸುರತ್ಕಲ್, ಸಮಾಜ ಸೇವಕ ಅಬ್ದುಲ್ ಆಜೀಜ್ ಸುರತ್ಕಲ್, ಕೃಷಿಕ ವೆಂಕಟೇಶ್ ಶೆಟ್ಟಿ ರವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಬಂಟರ ಸಂಘ ಸುರತ್ಕಲ್ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು,ಮಾಜೀ ಅಧ್ಯಕ್ಷ ಸುಧಾಕರ್ ಪೂಂಜಾ, ಉಲ್ಲಾಸ್ ಶೆಟ್ಟಿ ಪೆರ್ಮುದೆ, ಮಹಿಳಾ ವೇದಿಕೆ ಅಧ್ಯಕ್ಷೆ ಭವ್ಯ ಎ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.