ಬಂಟ್ವಾಳ: ಚುನಾವಣ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಮಾ. 31ರ ರಾತ್ರಿ ಫರಂಗಿಪೇಟೆಯಲ್ಲಿ ವಾಹನ ತಪಾಸಣೆಯ ಸಂದರ್ಭ ಯಾವುದೇ ದಾಖಲೆಗಳಿಲ್ಲದ ಅಕ್ಕಿ ಸಾಗಾಟ ಪ್ರಕರಣ ಬೆಳಕಿಗೆ ಬಂದಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸರು ಅಕ್ಕಿ ಹಾಗೂ ಲಾರಿ ಸೇರಿದಂತೆ ಒಟ್ಟು 13 ಲಕ್ಷ ರೂ.
ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಘಟನೆಯ ಕುರಿತು ಲಾರಿ ಚಾಲಕ ಬೆಂಗಳೂರು ನೆಲಮಂಗಲ ನಿವಾಸಿ ಸುನಿಲ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಅಕ್ಕಿಯು ಯಾರಿಗೆ ಸೇರಿದ್ದು, ಎಲ್ಲಿಂದ-ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬುದು ತನಿಖೆಯಿಂದ ಹೊರ ಬರಬೇಕಿದೆ. ಗ್ರಾಮಾಂತರ ಪೊಲೀಸರು ಫರಂಗಿಪೇಟೆ ಹೊರಠಾಣೆಯ ಬಳಿ ಚೆಕ್‌ಪೋಸ್ಟ್ ನಿರ್ಮಿಸಿ ವಾಹನಗಳ ತಪಾಸಣೆ ಮಾಡುತ್ತಿದ್ದು, ಪ್ರಸ್ತುತ ಚುನಾವಣೆಯ ಹಿನ್ನೆಲೆಯಲ್ಲಿ ತಪಾಸಣೆಯನ್ನು ಚುರುಕುಗೊಳಿಸಲಾಗಿತ್ತು.
300 ಗೋಣಿ ಚೀಲಗಳಲ್ಲಿ ತಲಾ 50 ಕೆಜಿಯಂತೆ 15 ಸಾವಿರ ಕೆಜಿ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಅಕ್ಕಿಯ ಮೌಲ್ಯ 6 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಸಾಗಾಟಕ್ಕೆ ಬಳಸಲಾದ 7 ಲಕ್ಷ ರೂ. ಮೌಲ್ಯದ ಲಾರಿಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
