Sunday, September 15, 2024
spot_img
More

    Latest Posts

    ಮಂಗಳೂರಿನಲ್ಲಿ ಆಕರ್ಷಕ ಪ್ರತಿಮೆಯೊಂದಿಗೆ ಅಂಬೇಡ್ಕರ್ ವೃತ್ತ : ನಾಗರಿಕ ಸಂಘಟನೆಗಳಿಂದ ಮೇಯರ್ ಗೆ ನೀಲ ನಕ್ಷೆ – ವಿನ್ಯಾಸ ಸಲ್ಲಿಕೆ, ಕಾಮಗಾರಿ ಆರಂಭಕ್ಕೆ ಆಗ್ರಹ

    ಮಂಗಳೂರು: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರದ ಅಂಬೇಡ್ಕರ್ ವೃತ್ತದಲ್ಲಿ ವೃತ್ತವನ್ನೇ ನಿರ್ಮಿಸದೆ ರಸ್ತೆ ಅಂಚಿನಲ್ಲಿ ಸ್ತೂಪದೊಳಗೆ ಪುಟ್ಟ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪನೆ ಮಾಡಿ, ಡಾ. ಅಂಬೇಡ್ಕರ್ ಅವರಿಗೆ ಅವಮಾನ ಮಾಡುವ ಯೋಜನೆಗೆ ಇದೇ ಆಗಸ್ಟ್ 15 ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಶಿಲಾನ್ಯಾಸ ಮಾಡಿಸಲು ಉದ್ದೇಶಿಸಲಾಗಿದ್ದ ಕಾರ್ಯಕ್ರಮದ ರದ್ಧತಿಗೆ ಕಾರಣಕರ್ತರಾದ ನಗರದ ವಿವಿಧ ನಾಗರಿಕ ಸಂಘಟನೆಗಳ ಮುಖಂಡರುಗಳು, ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನ ಅಧಿಕಾರಿಗಳು ಒದಗಿಸಿರುವ ಅಂಬೇಡ್ಕರ್ ವೃತ್ತ ಪ್ರದೇಶದ ನಕ್ಷೆಯ ಆಧಾರದಲ್ಲಿ, ಅಂಬೇಡ್ಕರ್ ಪ್ರತಿಮೆಯೊಂದಿಗೆ ಸುಂದರವಾದ ಅಂಬೇಡ್ಕರ್ ವೃತ್ತ ನಿರ್ಮಿಸಲು ನುರಿತ, ತಜ್ಞ ವಾಸ್ತು ಶಿಲ್ಪಿಗಳ ತಂಡದಿಂದ ಸಿದ್ಧ ಪಡಿಸಲಾದ ಮಾದರಿ ನೀಲ ನಕ್ಷೆ ಮತ್ತು ವಿನ್ಯಾಸವನ್ನು ಬುಧವಾರ, ದಿ 28.08.2024ರಂದು, ಮಹಾನಗರ ಪಾಲಿಕೆಗೆ ಸಲ್ಲಿಸಿದ್ದು, ಈ ವೃತ್ತದ ಕಾಮಗಾರಿಯನ್ನು ಶೀಘ್ರವೇ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಈ ಮುಖಂಡರ ನಿಯೋಗವು ಮಹಾನಗರ ಪಾಲಿಕೆಯ ಪ್ರತಿ ಪಕ್ಷದ ನಾಯಕ ಶ್ರೀ ಪ್ರವೀಣ್ ಚಂದ್ರ ಆಳ್ವ, ಜಿಲ್ಲಾಧಿಕಾರಿ ಮತ್ತು ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಅವರನ್ನೂ ಭೇಟಿಮಾಡಿ ಪ್ರಸ್ತಾಪಿತ ಅಂಬೇಡ್ಕರ್ ವೃತ್ತದ ನೀಲ ನಕ್ಷೆ ಮತ್ತು ವಿನ್ಯಾಸವನ್ನು ಸಲ್ಲಿಸಿ, ತನ್ನ ಆಗ್ರಹವನ್ನು ಮಂಡಿಸಿದೆ.

    ರಸ್ತೆ ಸುರಕ್ಷತಾ ಮಾರ್ಗಸೂಚಿಗೆ ಅನುಗುಣವಾಗಿ ಟ್ರಾಫಿಕ್ ಸಿಗ್ನಲ್ ಗಳು, ಗಾರ್ಡ್ ಸಹಿತ ಉತ್ತಮ ಫುಟ್ ಪಾತ್, ಪಾದಚಾರಿ ಸ್ನೇಹಿ ಸಿಗ್ನಲ್ ಮತ್ತು ಝೀಬ್ರಾ ಲೈನ್ ಹಾಗೂ ಪೊಲೀಸ್ ಚೌಕಿ ಸಹಿತ ಅತ್ಯಾಧುನಿಕ ರೀತಿಯಲ್ಲಿ ಅಂಬೇಡ್ಕರ್ ವೃತ್ತದ ಮಾದರಿ ನೀಲ ನಕ್ಷೆ ಮತ್ತು ವಿನ್ಯಾಸವನ್ನು ರೂಪಿಸಲಾಗಿದ್ದು, ಇದರಿಂದ ಈ ಪ್ರದೇಶದಲ್ಲಿ ರಸ್ತೆ ಬಳಕೆದಾರರ, ಸೈಕಲ್ ಸವಾರರ, ಪಾದಚಾರಿಗಳ ಸಂಪೂರ್ಣ ಸುರಕ್ಷೆ ಮತ್ತು ಎಲ್ಲ ವಾಹನಗಳ ವೇಗ ನಿಯಂತ್ರಣದೊಂದಿಗೆ ಸುಗಮ ಸಂಚಾರವನ್ನು ಖಾತರಿ ಮಾಡಬಹುದಾಗಿದೆ. ಇದು ಇಂದಿನ ತುರ್ತು ಅಗತ್ಯ ಕೂಡಾ ಎಂದು ಮೇಯರ್ ಅವರಿಗೆ ಮನವರಿಕೆ ಮಾಡಲಾಗಿದೆ.

    ಆಗಸ್ಟ್ 15 ಕ್ಕೆ ನಿಗದಿಗೊಂಡಿದ್ದ ಅಂಬೇಡ್ಕರ್ ಸ್ತೂಪ ರಚನೆಯ ಶಿಲಾನ್ಯಾಸ ಕಾರ್ಯಕ್ರಮವನ್ನು ರದ್ದು ಮಾಡಲು ನಮ್ಮ ನಿಯೋಗ ಆಗ್ರಹಿಸಿದ ವೇಳೆಯಲ್ಲಿ, ಮಾನ್ಯ ಮೇಯರ್ ಶ್ರೀ ಸುಧೀರ್ ಶೆಟ್ಟಿ ಕಣ್ಣೂರ್, ಪ್ರತಿಪಕ್ಷದ ನಾಯಕರಾದ ಶ್ರೀ ಪ್ರವೀಣ್ ಚಂದ್ರ ಆಳ್ವ, ಮತ್ತು ಉಭಯ ಪಕ್ಷಗಳ ಕಾರ್ಪೋರೇಟರ್ ಗಳು ಮತ್ತು ಮಾನ್ಯ ಜಿಲ್ಲಾಧಿಕಾರಿಗಳು ಎಲ್ಲರೂ ಅಂಬೇಡ್ಕರ್ ವೃತ್ತದಲ್ಲಿಯೇ ಉತ್ತಮವಾದ ಅಂಬೇಡ್ಕರ್ ಪ್ರತಿಮೆಯೊಂದಿಗೆ ಅಂಬೇಡ್ಕರ್ ವೃತ್ತ ನಿರ್ಮಿಸ ಬೇಕು ಎಂಬ ನಮ್ಮ ಬೇಡಿಕೆಗೆ ಬೆಂಬಲ – ಸಹಮತ ವ್ಯಕ್ತ ಪಡಿಸಿದ್ದರು. ಅಂದು ನಾವು ಅವರೆಲ್ಲರಿಗೆ ಮಾತು ಕೊಟ್ಟಂತೆ ತಜ್ಞ, ನುರಿತ ವಾಸ್ತುಶಿಲ್ಪಿಗಳ ತಂಡದಿಂದಲೇ ಸುಸಜ್ಜಿತವಾದ ರೀತಿಯಲ್ಲಿ ಅಂಬೇಡ್ಕರ್ ವೃತ್ತದ ನೀಲ ನಕ್ಷೆ ಮತ್ತು ವಿನ್ಯಾಸ ಸಿದ್ಧ ಪಡಿಸಿ, ಮಹಾನಗರ ಪಾಲಿಕೆಗೆ, ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಗೆ ಮತ್ತು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದೇವೆ.

    ಎಲ್ಲ ಚುನಾಯಿತ ಪ್ರತಿನಿಧಿಗಳ ಸಕ್ರಿಯ ಸಹಕಾರದೊಂದಿಗೆ ಅಂಬೇಡ್ಕರ್ ವೃತ್ತದಲ್ಲಿಯೇ ‘ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸ್ಫೂರ್ತಿದಾಯಕ ಪ್ರತಿಮೆಯೊಂದಿಗೆ ಸುಂದರವಾದ ಅಂಬೇಡ್ಕರ್ ವೃತ್ತ’ ನಿರ್ಮಾಣದ ಕಾಮಗಾರಿಯನ್ನು ತುರ್ತಾಗಿ ಆರಂಭಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳಬೇಕು ಎಂಬುದು ನಮ್ಮ ಆಗ್ರಹ.

    ಪ್ರಸ್ತಾಪಿತ ಅಂಬೇಡ್ಕರ್ ವೃತ್ತದ ಮಾದರಿ ನೀಲ ನಕ್ಷೆ ಮತ್ತು ವಿನ್ಯಾಸದ ಜೊತೆಯಲ್ಲಿ ನಗರದಲ್ಲಿ ಪ್ರಸಕ್ತ ಇರುವ ಇತರೆ ಪ್ರಮುಖ ವೃತ್ತಗಳ ಫೋಟೋಗಳು, ಅಂಬೇಡ್ಕರ್ ವೃತ್ತದಲ್ಲಿರುವ ಅಪಾಯಕಾರಿ ಸ್ವರೂಪದ ಅವ್ಯವಸ್ಥೆ ಮತ್ತು ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಯೋಚನೆ – ಯೋಜನೆ ಮಾಡದೆ ಮಂಗಳೂರು ಸ್ಮಾರ್ಟ್ ಸಿಟಿ ಸಿದ್ಧ ಪಡಿಸಿದ್ದ ಯೋಜನೆ ಹೇಗೆ ನಿಸ್ಪ್ರಯೋಜಕ ಎಂಬುದನ್ನು ಸಂಬಂಧ ಪಟ್ಟವರಿಗೆ ಸೂಚ್ಯವಾಗಿ ತಿಳಿಸಲಾಗಿದೆ.

    ಜಾತಿ, ಧರ್ಮ, ಭಾಷೆಗಳ ಎಲ್ಲೆ ಮೀರಿ, ನಗರದ ಪ್ರಜ್ಞಾವಂತ ನಾಗರಿಕರ ಬಹುದಿನಗಳ ಈ ಬೇಡಿಕೆಯನ್ನು ಆದ್ಯತೆಯ ಮೇರೆಗೆ ಈಡೇರಿಸಲು ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂಬುದು ಎಲ್ಲರ ಆಗ್ರಹ.

    ರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಅವರ ನೇತೃತ್ವದ ನಿಯೋಗವು ಮೇಯರ್ ಮತ್ತು ಅಧಿಕಾರಿಗಳನ್ನು ಭೇಟಿಮಾಡಿದ್ದು, ನಿಯೋಗದಲ್ಲಿ ತುಳುನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಅಹಿಂದ ಜಿಲ್ಲಾಧ್ಯಕ್ಷ ಭರತೇಶ್, ಸರಕಾರದ ಗ್ಯಾರಂಟಿಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಶಾಂತಲಾಗಟ್ಟಿ, ಮಾಜಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತೇಜೋಮಯ, ಪರಿಶಿಷ್ಟ ಜಾತಿ, ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮೋಹನಾಂಗಯ್ಯ ಸ್ವಾಮಿ, ಆದಿದ್ರಾವಿಡ ಮಹಾಸಭಾದ ರಾಜ್ಯಾಧ್ಯಕ್ಷ ಶಿವಾನಂದ, ಸಾಮಾಜಿಕ ಕಾರ್ಯಕರ್ತ ಹ್ಯಾರಿ ಹೆನ್ರಿ ಡಿ ಸೋಜ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಲಕ್ಷ್ಮಣ್ ಕಾಂಚನ್, ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ಮುಖಂಡರು, ಜಿಲ್ಲಾ ನಲಿಕೆ ಯಾನೇ ಪಾಣಾರ ಸಂಘದ ಅಧ್ಯಕ್ಷ ಪದ್ಮನಾಭ ಮೂಡಬಿದ್ರಿ, ಸಾಮಾಜಿಕ ಕಾರ್ಯಕರ್ತೆ ವಸಂತಿ ಅಂಚನ್, ಸತ್ಯ ಸಾರಮನಿ ದೇವಸ್ಥಾನದ ಅಧ್ಯಕ್ಷ ಅನಿಲ್ ಕಂಕನಾಡಿ,ಆರ್ ಟಿ ಐ ಕಾರ್ಯಕರ್ತ ಪ್ರಶಾಂತ್ ಭಟ್, ಕಲಾವಿದ ಹರೀಶ್, ತುಳುನಾಡ ರಕ್ಷಣಾ ವೇದಿಕೆ ಮುಂಬೈ ಸಂಘಟನಾ ಕಾರ್ಯದರ್ಶಿ ಯಶು ಪಕ್ಕಳ, ಮತ್ತಿತರರು ಇದ್ದು, ಸಂಬಂಧಪಟ್ಟವರಿಗೆ ಅಂಬೇಡ್ಕರ್ ಪ್ರತಿಮೆಯೊಂದಿಗೆ ಸುಸಜ್ಜಿತ ಹಾಗೂ ಅತ್ಯಾಧುನಿಕ ರೀತಿಯಲ್ಲಿ ಅಂಬೇಡ್ಕರ್ ವೃತ್ತ ನಿರ್ಮಿಸುವ ಅಗತ್ಯದ ಬಗ್ಗೆ ಪೂರಕ ಮಾಹಿತಿಗಳನ್ನು ನೀಡಿದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss