ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ ನಡೆದಿದೆ. ನಂತರದ ಬೆಳವಣಿಗೆಯಲ್ಲಿ ಇತ್ತಂಡಗಳ ಬೆಂಬಲಿಗರು ಹೊಡೆದಾಟಕ್ಕೆ ಸಿದ್ಧವಾಗುತ್ತಿರುವಾಗಲೇ ಪೊಲೀಸರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿಯಲ್ಲಿ ತಿಳಿಗೊಳಿಸಿದರು.
ಈ ಬಗ್ಗೆ ಮಾಹಿತಿ ಪಡೆದ ಉಪ್ಪಿನಂಗಡಿ ಸಬ್ ಇನ್ಸ್ಪೆಕ್ಟರ್ ರಾಜೇಶ್ ಅವರು ಹೆಚ್ಚುವರಿ ಪೊಲೀಸ್ ಪಡೆಯೊಂದಿಗೆ ಕಾಲೇಜಿಗೆ ಧಾವಿಸಿ ಸಂಘರ್ಷಕ್ಕೆ ನಿಂತಿದ್ದ ವಿದ್ಯಾರ್ಥಿಗಳನ್ನು ಚದುರಿಸಿ, ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು. ಹತ್ತಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಅವರವರ ಹೆತ್ತವರೊಂದಿಗೆ ಪ್ರಾಚಾರ್ಯರನ್ನು ಭೇಟಿಮಾಡಲು ಸೂಚಿಸಿ, ಮುಚ್ಚಳಿಕೆ ಪತ್ರ ಬರೆದ ಬಳಿಕವೇ ತರಗತಿಗೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಯಿತು.
ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ ದ್ವಿತೀಯ ಪಿಯುಸಿ ವಿದ್ಯಾರ್ಥಿಯ ಮೇಲೆ ಗುರುವಾರ ಸಂಜೆ ಹಲ್ಲೆ ನಡೆಸಿದ್ದ ಎಂದು ಆರೋಪಿಸಲಾಗಿದೆ. ಅದರ ನಂತರದ ಬೆಳವಣಿಗೆಯಲ್ಲಿ ಶುಕ್ರವಾರ ಎರಡೂ ವಿದ್ಯಾರ್ಥಿಗಳ ಬೆಂಬಲಿಗರು ಜಮಾಯಿಸಿ ಹೊಡೆದಾಟಕ್ಕೆ ಸಿದ್ಧರಾಗಿದ್ದರು.
