ಹೆಬ್ರಿ ತಾಲೂಕಿನ ನಾಡ್ಪಾಲ್ ಗ್ರಾಮದ ಜನತಾ ಕಾಲೋನಿ ಸುತ್ತಮುತ್ತ ಅರಣ್ಯ ಪ್ರದೇಶಗಳಲ್ಲಿ ಕಸದ ಸಮಸ್ಯೆ ತೀವ್ರ ರೂಪ ಪಡೆದುಕೊಂಡಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಎಲ್ಲೆಂದರಲ್ಲಿ ಸುರಿಯಲಾಗುತ್ತಿರುವ ಕಸದ ರಾಶಿಗಳನ್ನು ದನಗಳು, ನಾಯಿಗಳು ಹಾಗೂ ಕಾಡು ಪ್ರಾಣಿಗಳು ತಿಂದು ಇಡೀ ಪರಿಸರಕ್ಕೆ ಹರಡುವ ಸ್ಥಿತಿ ಉಂಟಾಗಿದೆ. ಇದರಿಂದ ಪರಿಸರ ಮಾಲಿನ್ಯ ಹೆಚ್ಚಾಗುವುದರ ಜೊತೆಗೆ ಆರೋಗ್ಯ ಸಮಸ್ಯೆಗಳ ಭೀತಿಯೂ ಎದುರಾಗಿದೆ.

ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ವ್ಯವಸ್ಥೆಗೆ ಮೂಲಭೂತ ಸೌಕರ್ಯಗಳ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹೆಬ್ರಿ ತಾಲೂಕಿನ ನಾಡ್ಪಾಲ್ ಗ್ರಾಮ ಪಂಚಾಯಿತಿಗೆ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಸೂಕ್ತ ಜಾಗದ ಕೊರತೆ ಹಲವು ವರ್ಷಗಳಿಂದ ಸಮಸ್ಯೆಯಾಗಿಯೇ ಉಳಿದಿದೆ. ರಾಜ್ಯದ ಎರಡನೇ ಅತಿ ದೊಡ್ಡ ಗ್ರಾಮವೆಂದು ಗುರುತಿಸಿಕೊಂಡಿರುವ ಈ ಭಾಗದಲ್ಲಿ ಹೆಚ್ಚಿನ ಪ್ರದೇಶ ಅರಣ್ಯ ಭೂಮಿಯಿಂದ ಆವೃತವಾಗಿರುವುದರಿಂದ, ಹೊಸ ಘಟಕಕ್ಕೆ ಜಾಗ ಗುರುತಿಸುವುದು ಕಷ್ಟಕರವಾಗಿದೆ.
ಪ್ರಸ್ತುತ ಸೋಮೇಶ್ವರ ಪೇಟೆಯ ಕಸವನ್ನು ಪ್ರತಿದಿನ ಹೆಬ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಲಾಗುತ್ತಿದೆ. ಇದರಿಂದ ಈಗಿರುವ ವ್ಯವಸ್ಥೆಯ ಮೇಲಿನ ಒತ್ತಡ ಹೆಚ್ಚಾಗಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು, ಸೋಮೇಶ್ವರ ಪೇಟೆಯ ಸಮೀಪದ ಸರ್ವೆ ನಂಬರ್ 97/2ಎ ಯಲ್ಲಿರುವ ಸುಮಾರು 9.67 ಎಕರೆ ಸರ್ಕಾರಿ ಜಾಗದಲ್ಲಿ ಕನಿಷ್ಠ 2 ಎಕರೆ ಭೂಮಿಯನ್ನು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಮೀಸಲಿಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಇನ್ನು, ಶಿವಮೊಗ್ಗ, ಉಡುಪಿ, ಕುಂದಾಪುರ ಹಾಗೂ ಕೊಲ್ಲೂರು ಕಡೆಗೆ ಸಂಚರಿಸುವ ಪ್ರವಾಸಿಗರು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಬದಿಯಲ್ಲಿ ಕಸ ಎಸೆಯುವ ಪ್ರವೃತ್ತಿಯೂ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಕೂಡ ತಕ್ಷಣ ಕ್ರಮ ಕೈಗೊಂಡು ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಗಿದೆ.
ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಸ್ಪಂದಿಸಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಬೃಹತ್ ಮಟ್ಟದ ಹೋರಾಟಗಳನ್ನು ಕೈಗೊಳ್ಳಲಾಗುವುದು ಎಂದು ಜನತಾದಳ ಜಾತ್ಯತೀತ ಕಾರ್ಕಳ ಹೆಬ್ರಿ ಘಟಕ ಅದ್ಯಕ್ಷ ಶ್ರೀಕಾಂತ್ ಪೂಜಾರಿ ಕುಚ್ಚೂರು ಎಚ್ಚರಿಕೆ ನೀಡಿದ್ದಾರೆ.

