ಮಂಗಳೂರು : ವೃಕ್ಷ ಬಿಸಿನೆಸ್ ಸೊಲ್ಯೂಷನ್ ಸಂಸ್ಥೆಯಿಂದ ವಂಚನೆಗೊಳಗಾದ ಸಾವಿರಾರು ಠೇವಣಿದಾರರಿಗೆ ತ್ವರಿತ ನ್ಯಾಯ, ಹಣ ಮರುಪಾವತಿ ಹಾಗೂ ಕೊಳಂಬೆ ಗ್ರಾಮದ ಕೃತಕ ಜಲಾವೃತ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಬುಧವಾರ ಎರಡು ಪ್ರತ್ಯೇಕ ಮನವಿಗಳನ್ನು ತುಳುನಾಡ ರಕ್ಷಣಾ ವೇದಿಕೆ ರಾಜ್ಯಾದ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪುರವರ ನೇತೃತ್ವದಲ್ಲಿ ಸಲ್ಲಿಸಲಾಯಿತು.
ವೃಕ್ಷ ಬಿಸಿನೆಸ್ ಸೊಲ್ಯೂಷನ್ ಸಂಸ್ಥೆಯು ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ನೆರೆಯ ಕೇರಳದ ಸಾವಿರಾರು ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಠೇವಣಿಗಳನ್ನು ಸಂಗ್ರಹಿಸಿ ಬಳಿಕ ಹಣ ಮರುಪಾವತಿಸದೆ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಹಲವು ವರ್ಷಗಳಿಂದ ತುಳುನಾಡ ರಕ್ಷಣಾ ವೇದಿಕೆ ನಿರಂತರ ಹೋರಾಟ ನಡೆಸುತ್ತಿದ್ದು, ಸಂತ್ರಸ್ತರ ಪರವಾಗಿ ಸರ್ಕಾರ ಮತ್ತು ನ್ಯಾಯಾಲಯಗಳ ಮಟ್ಟದಲ್ಲಿ ನ್ಯಾಯಕ್ಕಾಗಿ ಧ್ವನಿ ಎತ್ತುತ್ತಿದೆ.

ಪ್ರಕರಣವನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ KPIDFE Act, 2004 ಹಾಗೂ BUDS Act, 2019ರ ಅನ್ವಯ ಬೆಂಗಳೂರಿನ ವಿಶೇಷ ನ್ಯಾಯಾಲಯ (CCH-93)ಕ್ಕೆ ವರ್ಗಾಯಿಸಿರುವ ಹಿನ್ನೆಲೆಯಲ್ಲಿ, ವಿಚಾರಣೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವುದು, ಜಪ್ತಿ ಮಾಡಿದ ಆಸ್ತಿಗಳ ಮೂಲಕ ವಂಚನೆಗೊಳಗಾದ ಠೇವಣಿದಾರರಿಗೆ ಶೀಘ್ರ ಹಣ ಮರುಪಾವತಿಸುವುದು, ಬೆಂಗಳೂರಿಗೆ ವಿಚಾರಣೆಗೆ ತೆರಳುವ ಸಾಕ್ಷಿದಾರರಿಗೆ ಪೊಲೀಸ್ ಭದ್ರತೆ, ಪ್ರಯಾಣ ಭತ್ಯೆ ಹಾಗೂ ವಸತಿ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇದಲ್ಲದೆ, ಪ್ರಕರಣದ ತನಿಖೆ, ಜಪ್ತಿ ಮಾಡಲಾದ ಆಸ್ತಿಗಳ ಸ್ಥಿತಿ ಹಾಗೂ ಹಣ ಮರುಪಾವತಿ ಪ್ರಕ್ರಿಯೆಯ ಬಗ್ಗೆ ಸಂತ್ರಸ್ತರಿಗೆ ನಿಯಮಿತ ಮಾಹಿತಿ ನೀಡುವ ವ್ಯವಸ್ಥೆ ಮಾಡಬೇಕು ಹಾಗೂ ವಿಶೇಷ ಸರ್ಕಾರಿ ಅಭಿಯೋಜಕರ ಮೂಲಕ ಪರಿಣಾಮಕಾರಿ ಮತ್ತು ತ್ವರಿತ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ.
ಇದೇ ವೇಳೆ, ಕಂದಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಂಬೆ ಗ್ರಾಮದ ಕಲ್ಲಾಪು ಬೈಲು ಬೀಡು ಪ್ರದೇಶದಲ್ಲಿ ಗದ್ದೆಗೆ ಅಕ್ರಮವಾಗಿ ಮಣ್ಣು ತುಂಬಿಸಿ ಸಹಜ ಮಳೆನೀರು ಹರಿಯುವ ಮಾರ್ಗವನ್ನು ಮುಚ್ಚಿರುವ ಪರಿಣಾಮ ಉಂಟಾಗಿರುವ ಕೃತಕ ಜಲಾವೃತ ಸಮಸ್ಯೆ ಕುರಿತು ಮತ್ತೊಂದು ಮನವಿ ಸಲ್ಲಿಸಲಾಯಿತು.
ಅಕ್ರಮ ಮಣ್ಣುತುಂಬುವಿಕೆಯಿಂದ ಮಳೆನೀರು ಮನೆಗಳ ಸುತ್ತ ನಿಂತು ನಿವಾಸಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಮನೆಗಳಿಗೆ ನೀರು ನುಗ್ಗುವುದು, ಸಂಚಾರಕ್ಕೆ ಅಡಚಣೆ ಉಂಟಾಗುವುದು ಹಾಗೂ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿರುವುದರಿಂದ ಜಿಲ್ಲಾಡಳಿತ ತುರ್ತು ಆದ್ಯತೆಯ ಮೇರೆಗೆ ಸಮಸ್ಯೆ ಪರಿಹರಿಸಬೇಕು ಎಂದು ವೇದಿಕೆ ಒತ್ತಾಯಿಸಿದೆ.
ಸ್ಥಳಕ್ಕೆ ಅಧಿಕಾರಿಗಳ ತಂಡವನ್ನು ಕಳುಹಿಸಿ ಪರಿಶೀಲನೆ ನಡೆಸುವುದು, ಅಕ್ರಮವಾಗಿ ತುಂಬಿಸಿರುವ ಮಣ್ಣನ್ನು ತೆರವುಗೊಳಿಸಿ ಸಹಜ ನೀರು ಹರಿವಿನ ಮಾರ್ಗವನ್ನು ಮರುಸ್ಥಾಪಿಸುವುದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವುದು, ಹಾನಿಗೊಳಗಾದ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವುದು ಹಾಗೂ ಭವಿಷ್ಯದಲ್ಲಿ ಇಂತಹ ಸಮಸ್ಯೆ ಮರುಕಳಿಸದಂತೆ ಶಾಶ್ವತ ಚರಂಡಿ ಮತ್ತು ನೀರು ಹರಿವಿನ ವ್ಯವಸ್ಥೆ ನಿರ್ಮಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಮನವಿಯೊಂದಿಗೆ ಜಲಾವೃತಗೊಂಡಿರುವ ಪ್ರದೇಶ ಹಾಗೂ ಗದ್ದೆಗೆ ಅಕ್ರಮವಾಗಿ ಮಣ್ಣು ತುಂಬಿಸಿರುವ ಸ್ಥಳದ ಛಾಯಾಚಿತ್ರಗಳನ್ನೂ ಅಧಿಕಾರಿಗಳಿಗೆ ಸಲ್ಲಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
ಸಾವಿರಾರು ವೃಕ್ಷ ಸಂತ್ರಸ್ತರಿಗೆ ನ್ಯಾಯ ದೊರಕುವವರೆಗೆ ಹಾಗೂ ಸಾರ್ವಜನಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುವವರೆಗೆ ತುಳುನಾಡ ರಕ್ಷಣಾ ವೇದಿಕೆಯ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ವೇದಿಕೆ ತಿಳಿಸಿದೆ
ನಿಯೋಗದಲ್ಲಿ ಕೇಂದ್ರಿಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಕಾನೂನು ಸಲಹೆಗಾರ ವಿನೋಧರ ಪೂಜಾರಿ, ಎಂಬುಲೆನ್ಸ್ ಘಟಕ ಅದ್ಯಕ್ಷೆ ರಾಧಿಕ ಸಿ . ಎಸ್. ಕುಳಾಯಿ, ಮಂಗಳೂರು ಘಟಕ ಕಾರ್ಯದ್ಯಕ್ಷ ಕ್ಲೀಟಸ್ ಲೋಬೊ, ಮಹಿಳಾ ಘಟಕ ಉಪಾದ್ಯಕ್ಷೆ ಶಾರದ ಶೆಟ್ಟಿ ಅತ್ತಾವರ,ಝಬೀನಾ, ಚಂದ್ರಕಲಾ, ಕುಸಲ, ಪ್ರಕಾಶ್, ರಾಮ ಬಂಗೇರ,ಜಲೀಲ್, ಸ್ಟಾನಿ, ವೀರಾ ಡಿಮೇಲ್ಲೊ , ಯೋಗಿನಿ ಮಾಲೆಮಾರ್,ಆಶಾ, ಸರೋಜಿನಿ, ಪೌಝಿಯಾ, ಪೂಜಾ ರಾವ್ ,ಹರಿಣಾಕ್ಷಿ , ಸುಕೇಶ್ ಬಾಲಕೃಷ್ಣ ಪೂಜಾರಿ, ಸಂದ್ಯ ಪಿ, ಶೃುತಿ , ಸಚೀಂದ್ರ ,ಸುನಂದ , ವಿಜಯಲಕ್ಷ್ಮಿ ,ಶಾಲಿನಿ, ಜೆಸ್ಸಿ ಡಿಸೋಜ , ಹರುಷ ಕುಮಾರ್ , ಶಂಮುಷದ್, ಕೈರುನೀಸಾ, ಉದಯ ಕುಮಾರ್, ಸುನೀಲ್, ಮಮತಾ , ಲಾವಣ್ಯ , ಪ್ರಪುಲ್ಲಾ ,ಸುರೇಶ್, ಜ್ಯೋತಿ ಲಕ್ಷಿ , ಶಾಲಿನಿ, ಚಂದ್ರವತಿ,ದಯಾವತಿ ಸಾಲಿಯಾನ್ ದಿಲ್ ನವಾಜ್ ,ಉಜ್ವಲ್, ಸೇರಿದಂತೆ ಜಿಲ್ಲೆಯ ನೂರಾರು ತುಳುನಾಡ ರಕ್ಷಣಾ ವೇದಿಕೆ ಪ್ರಮುಖರು ಮತ್ತು ಸಂತ್ರಸ್ತರು ಉಪಸ್ಥಿತರಿದ್ದರು


