ಮೂಲ್ಕಿ, ಜುಲೈ 3: ಬ್ಯಾರಿ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂರಕ್ಷಣೆ ಹಾಗೂ ಬೆಳವಣಿಗೆಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಮೂಲ್ಕಿ ತಾಲೂಕು ಬ್ಯಾರಿ ಸಾಹಿತ್ಯ ಪರಿಷತ್ ವತಿಯಿಂದ ಉದ್ಘಾಟನಾ ಸಮಾರಂಭ, ಸದಸ್ಯತ್ವ ಅಭಿಯಾನ, ಪೂರ್ಣ ಪ್ರಮಾಣದ ಸಮಿತಿ ರಚನೆ ಮತ್ತು ಬ್ಯಾರಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಜುಲೈ 5ರಂದು (ಭಾನುವಾರ) ಹಳೆಯಂಗಡಿ ಸಾಗ್ ಬದ್ರಿಯಾ ಜುಮಾ ಮಸೀದಿಯ ಸಭಾಭವನದಲ್ಲಿ ನಡೆಯಲಿದೆ.
ಮಧ್ಯಾಹ್ನ 2 ಗಂಟೆಗೆ ಆರಂಭಗೊಳ್ಳುವ ಕಾರ್ಯಕ್ರಮವನ್ನು ಸಾಗ್ ಬದ್ರಿಯಾ ಜುಮಾ ಮಸೀದಿಯ ಖತೀಬ್ ಇ.ಎಂ. ಅಬ್ದುಲ್ಲಾ ಮದನಿ ಅವರು ದುಆ ನೆರವೇರಿಸುವ ಮೂಲಕ ಉದ್ಘಾಟಿಸಲಿದ್ದಾರೆ. ಪರಿಷತ್ ಅಧ್ಯಕ್ಷ ನಿಸಾರ್ ಅಹ್ಮದ್ ಅಂಗರಗುಡ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮೂಲ್ಕಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಬ್ಯಾರಿ ಸಮುದಾಯದ ಹಿರಿಯರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿರಲಿದ್ದಾರೆ.
ಹಳೆಯಂಗಡಿ ಸಾಗ್ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಖಾದರ್ (ಅದ್ದು), ಅಬ್ದುಲ್ ರಹಿಮಾನ್ ಕುಡುಂಬೂರು, ಎಂ.ಕೆ. ಸುಹೈಲ್ ಕಾರ್ನಾಡ್, ಹನೀಫ್ ಗುತ್ತಕಾಡು, ಹಾಜಿ ಕೆ.ಯು. ಮುಹಮ್ಮದ್ ನೂರಾನಿಯಾ, ಮುಹಮ್ಮದ್ ಶರೀಫ್ ಬಳಕುಂಜೆ, ಇಕ್ಬಾಲ್ ಅಹ್ಮದ್ ಮೂಲ್ಕಿ, ಬಶೀರ್ ಕೋಲ್ನಾಡು, ಎಂ.ಇ. ಮುಹಮ್ಮದ್ ಹನೀಫ್, ಆಸೀಫ್ ಎನ್.ಬಿ.ಎಂ. ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಲಿದ್ದಾರೆ.
ಈ ಸಂದರ್ಭದಲ್ಲಿ ಬ್ಯಾರಿ ಸಾಹಿತ್ಯ, ಶಿಕ್ಷಣ, ಸಮಾಜಸೇವೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಗುವುದು. ಜೊತೆಗೆ ಪರಿಷತ್ತಿನ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ, ಮೂಲ್ಕಿ ತಾಲೂಕು ಘಟಕದ ಪೂರ್ಣ ಪ್ರಮಾಣದ ಸಮಿತಿಯನ್ನು ರಚಿಸುವ ಕಾರ್ಯವೂ ನಡೆಯಲಿದೆ.

