ಮಂಗಳೂರು, ಜುಲೈ 3: ಕೆಲವು ದಿನಗಳ ಹಿಂದೆ ಮಂಗಳೂರಿನ ನಾಗೋರಿ ಪ್ರದೇಶದಲ್ಲಿ ಭಾರೀ ಮಳೆಯ ಪರಿಣಾಮ ಸಂಭವಿಸಿದ ಗುಡ್ಡ ಕುಸಿತದ ದುರಂತದಲ್ಲಿ ಅಮೂಲ್ಯ ಜೀವಗಳು ಬಲಿಯಾದ ಘಟನೆ ಇನ್ನೂ ಜನರ ಮನಸ್ಸಿನಿಂದ ಮಾಸುವ ಮುನ್ನವೇ, ನಗರದ ಬಿಕರ್ಣಕಟ್ಟೆ–ಬಜ್ಜೋಡಿ ಪ್ರದೇಶದಲ್ಲೂ ಗುಡ್ಡ ಕುಸಿತದ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಜನತಾದಳ (ಜಾತ್ಯತೀತ) ಪಕ್ಷದ ಮುಖಂಡರು ಇಂದು ಅಪಾಯದ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಶೆಟ್ಟಿ ಜಪ್ಪು ರವರು ಅಪಾಯದ ಪ್ರದೇಶವನ್ನು ವೀಕ್ಷಿಸಿ ಸ್ಥಳೀಯ ನಿವಾಸಿಗಳ ಅಹವಾಲುಗಳನ್ನು ಆಲಿಸಿತು. ನಿರಂತರ ಮಳೆಯಿಂದ ಗುಡ್ಡದಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಮತ್ತಷ್ಟು ಮಳೆಯಾದರೆ ಗುಡ್ಡ ಕುಸಿಯುವ ಆತಂಕ ಎದುರಾಗಿದೆ ಎಂದು ಸ್ಥಳೀಯರು ತಿಳಿಸಿದರು. ಹಲವು ಕುಟುಂಬಗಳು ಜೀವಭಯದ ನಡುವೆ ದಿನ ಕಳೆಯುತ್ತಿದ್ದು, ಆಡಳಿತ ತಕ್ಷಣ ಮಧ್ಯಪ್ರವೇಶಿಸಿ ಸುರಕ್ಷತಾ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು., “ನಾಗೋರಿ ದುರಂತದಲ್ಲಿ ಅಮೂಲ್ಯ ಜೀವಗಳು ಕಳೆದುಹೋದ ನಂತರ ಪರಿಹಾರ ಕಾರ್ಯಗಳು ನಡೆದವು. ಆದರೆ, ಜೀವಹಾನಿಯಾದ ಬಳಿಕ ಪರಿಹಾರ ಘೋಷಿಸುವುದಕ್ಕಿಂತ ಅನಾಹುತ ಸಂಭವಿಸುವ ಮುನ್ನವೇ ಸರ್ಕಾರ ಹಾಗೂ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಅಗತ್ಯ. ನಾಗೋರಿ ಘಟನೆ ಮರುಕಳಿಸದಂತೆ ಬಿಕರ್ಣಕಟ್ಟೆ–ಬಜ್ಜೋಡಿ ಸೇರಿದಂತೆ ಗುಡ್ಡ ಕುಸಿತದ ಅಪಾಯವಿರುವ ಎಲ್ಲ ಪ್ರದೇಶಗಳ ತುರ್ತು ತಾಂತ್ರಿಕ ಪರಿಶೀಲನೆ ನಡೆಸಿ, ಅಪಾಯದಲ್ಲಿರುವ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು” ಎಂದು ಆಗ್ರಹಿಸಿದರು.
ಜೆಡಿಎಸ್ ಯುವ ಘಟಕದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಅಕ್ಷಿತ್ ಸುವರ್ಣ ಮಾತನಾಡಿ, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಅಪಾಯದ ಪ್ರದೇಶಗಳನ್ನು ಗುರುತಿಸಿ ನಿರಂತರ ಮೇಲ್ವಿಚಾರಣೆ ನಡೆಸಬೇಕು. ಜನರ ಜೀವಕ್ಕೆ ಅಪಾಯ ಉಂಟಾಗುವ ಮುನ್ನವೇ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಯಾವುದೇ ಅನಾಹುತ ಸಂಭವಿಸದಂತೆ ನೋಡಿಕೊಳ್ಳುವುದು ಆಡಳಿತದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಜೆಡಿಎಸ್ ರಾಜ್ಯ ಮೀನುಗಾರಿಕಾ ಘಟಕದ ರಾಜ್ಯಾಧ್ಯಕ್ಷ ರತ್ನಾಕರ್ ಸುವರ್ಣ ಮಾತನಾಡಿ, ಅಪಾಯದ ಪರಿಸ್ಥಿತಿಯನ್ನು ಸರ್ಕಾರ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಮಳೆಗಾಲದಲ್ಲಿ ಜನರು ಜೀವಭಯದಲ್ಲಿ ಬದುಕುವಂತಹ ಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ. ಗುಡ್ಡ ಕುಸಿತದ ಅಪಾಯವಿರುವ ಪ್ರದೇಶಗಳಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣ, ಗುಡ್ಡದ ಬಲವರ್ಧನೆ ಹಾಗೂ ಮಳೆನೀರು ಸರಾಗವಾಗಿ ಹರಿಯಲು ವೈಜ್ಞಾನಿಕ ಚರಂಡಿ ವ್ಯವಸ್ಥೆ ಕಲ್ಪಿಸುವ ಮೂಲಕ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ನಿಯೋಗವು ಜಿಲ್ಲಾಡಳಿತಕ್ಕೆ ಬಿಕರ್ಣಕಟ್ಟೆ–ಬಜ್ಜೋಡಿ ಪ್ರದೇಶದಲ್ಲಿ ತುರ್ತು ತಾಂತ್ರಿಕ ಸಮೀಕ್ಷೆ ನಡೆಸಿ, ಅಪಾಯದಲ್ಲಿರುವ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದು, ಶಾಶ್ವತ ತಡೆಗೋಡೆ ನಿರ್ಮಾಣ, ಮಳೆನೀರು ಸರಾಗವಾಗಿ ಹರಿಯಲು ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸುವುದು ಹಾಗೂ ಗುಡ್ಡ ಕುಸಿತ ತಡೆಗಟ್ಟಲು ಅಗತ್ಯ ಭದ್ರತಾ ಕಾಮಗಾರಿಗಳನ್ನು ತುರ್ತುಗತಿಯಲ್ಲಿ ಕೈಗೊಳ್ಳುವಂತೆ ಆಗ್ರಹಿಸಿತು.
“ನಾಗೋರಿ ದುರಂತದಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಸರ್ಕಾರ ಎಚ್ಚೆತ್ತುಕೊಂಡು ಮುನ್ನೆಚ್ಚರಿಕಾ ಕ್ರಮಗಳಿಗೆ ಮೊದಲ ಆದ್ಯತೆ ನೀಡಬೇಕು. ಜನರ ಜೀವ ರಕ್ಷಣೆ ಸರ್ಕಾರದ ಮೊದಲ ಕರ್ತವ್ಯವಾಗಬೇಕು” ಎಂದು ಜೆಡಿಎಸ್ ಮುಖಂಡರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಸ್ಥಳೀಯ ಮುಖಂಡರು, ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸ್ಥಳೀಯ ಸಾರ್ವಜನಿಕರು ಉಪಸ್ಥಿತರಿದ್ದರು.

