ತುಳು ಚಿತ್ರರಂಗದ ಮುಂಚೂಣಿ ವ್ಯಕ್ತಿ, ಪ್ರತಿಭಾವಂತ ನಾಟಕ ರಚನೆಗಾರರು, ಸಮಾಜಮುಖಿ ಚಿಂತಕರು, ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರು ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ನಮ್ಮ ಆತ್ಮೀಯ ಮಿತ್ರರಾದ ರಾಮಚಂದರ್ ಬೈಕಂಪಾಡಿ ಅವರ ನಿಧನವು ತುಳುನಾಡಿನ ಸಾಂಸ್ಕೃತಿಕ ಲೋಕಕ್ಕೂ, ಸಮಾಜ ಜೀವನಕ್ಕೂ ತುಂಬಲಾರದ ನಷ್ಟವಾಗಿದೆ.
ಅವರ ಅಗಲಿಕೆ ಅನಿರೀಕ್ಷಿತ ಅಘಾತವಾಗಿದ್ದು, ತುಳು ಭಾಷೆ, ಸಂಸ್ಕೃತಿ ಮತ್ತು ನಾಟಕ ರಂಗದ ಬೆಳವಣಿಗೆಗೆ ಅವರು ನೀಡಿದ ಸೇವೆ ಅಪಾರ ಮತ್ತು ಅಮೂಲ್ಯವಾಗಿದೆ. ನಾಟಕಗಳ ಮೂಲಕ ಸಮಾಜದ ಅಸಮಾನತೆ, ಸಂಸ್ಕೃತಿ ಮೌಲ್ಯಗಳು ಹಾಗೂ ಜನಜಾಗೃತಿಯ ವಿಚಾರಗಳನ್ನು ಜನಸಾಮಾನ್ಯರೊಳಗೆ ತಲುಪಿಸುವಲ್ಲಿ ಅವರು ವಿಶೇಷ ಪಾತ್ರವಹಿಸಿದ್ದರು. ತುಳು ಚಿತ್ರರಂಗದ ಬೆಳವಣಿಗೆಯಲ್ಲಿಯೂ ಅವರು ತೋರಿದ ಸಮರ್ಪಣೆ, ಶ್ರಮ ಮತ್ತು ಬದ್ಧತೆ ಸದಾ ಸ್ಮರಣೀಯವಾಗಿರುತ್ತದೆ.
ಸಾಮಾಜಿಕ ಧುರೀಣರಾಗಿ ಅವರು ಅನೇಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಸಮಾಜದ ಎಲ್ಲಾ ವರ್ಗಗಳ ಜನರೊಂದಿಗೆ ಆತ್ಮೀಯ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು. ಸರಳತೆ, ಸೌಜನ್ಯ, ನಿಷ್ಠೆ ಮತ್ತು ನಾಯಕತ್ವದ ಗುಣಗಳಿಂದ ಅವರು ಎಲ್ಲರ ಹೃದಯಗಳಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದರು.
ತುಳುನಾಡ ರಕ್ಷಣಾ ವೇದಿಕೆಯ ಅಂತರಾಷ್ಟ್ರೀಯ ಗೌರವಾಧ್ಯಕ್ಷ ಫ್ರಾಂಕ್ ಫೆರ್ನಾಂಡಿಸ್ ಹಾಗೂ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಅವರು ರಾಮಚಂದರ್ ಬೈಕಂಪಾಡಿ ಅವರ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಅಗಲಿಕೆಯಿಂದ ಉಂಟಾದ ಶೂನ್ಯವನ್ನು ಭರಿಸುವುದು ಅಸಾಧ್ಯವಾಗಿದ್ದು, ತುಳುನಾಡಿನ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರವು ಒಬ್ಬ ಮಹತ್ವದ ಮಾರ್ಗದರ್ಶಿಯನ್ನು ಕಳೆದುಕೊಂಡಿದೆ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ, ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಮೃತರ ಕುಟುಂಬದವರಿಗೆ ಹೃದಯಪೂರ್ವಕ ಸಂತಾಪ ಸೂಚಿಸಲಾಗಿದ್ದು, ಈ ದುಃಖದ ಘಳಿಗೆಯಲ್ಲಿ ದೇವರು ಅವರಿಗೆ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಲಾಗಿದೆ.
ಭಗವಂತನು ರಾಮಚಂದರ್ ಬೈಕಂಪಾಡಿ ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ.

