ಬೆಂಜನಪದವಿನಲ್ಲಿ ವಿಶೇಷ ಪೂಜೆ; ಹೊಸ ಸಿನಿಮಾಗಳ ಯಶಸ್ಸಿಗೆ ದೈವದ ಆಶೀರ್ವಾದ ಪಡೆದ ‘ಡಿಂಪಲ್ ಕ್ವೀನ್’
ರಚಿತಾ ರಾಮ್ ಅವರು ತುಳುನಾಡಿನ ಆರಾಧ್ಯ ಕಾರಣಿಕ ದೈವವಾದ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಹರಕೆ ಕೋಲ ಸೇವೆ ಸಲ್ಲಿಸಿ ಭಕ್ತಿಭಾವ ಮೆರೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೆಂಜನಪದವಿನಲ್ಲಿರುವ ಪ್ರಸಿದ್ಧ ಕೊರಗಜ್ಜ ಕ್ಷೇತ್ರಕ್ಕೆ ಆಗಮಿಸಿದ ನಟಿ, ಶ್ರದ್ಧಾಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿ ತಮ್ಮ ಹರಕೆಯನ್ನು ನೆರವೇರಿಸಿದರು. ಕೆಲವು ಪ್ರಮುಖ ಕೆಲಸಗಳು ಯಶಸ್ವಿಯಾಗಿ ನೆರವೇರಿದರೆ ಕೊರಗಜ್ಜ ದೈವಕ್ಕೆ ಕೋಲ ಸೇವೆ ನೀಡುವುದಾಗಿ ಅವರು ಹಿಂದೆ ಹರಕೆ ಹೊತ್ತಿದ್ದು, ಇದೀಗ ಅದು ಈಡೇರಿದ ಹಿನ್ನೆಲೆಯಲ್ಲಿ ಸನ್ನಿಧಿಗೆ ಭೇಟಿ ನೀಡಿ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ತುಳುನಾಡಿನ ದೈವಾರಾಧನೆ ಮತ್ತು ಕೋಲ ಸಂಪ್ರದಾಯದ ಬಗ್ಗೆ ವಿಶೇಷ ಭಕ್ತಿ ಹೊಂದಿರುವ ಅನೇಕ ಸಿನಿತಾರೆಯರಂತೆ, ರಚಿತಾ ರಾಮ್ ಕೂಡ ದೈವದ ಆಶೀರ್ವಾದ ಪಡೆಯಲು ಕ್ಷೇತ್ರಕ್ಕೆ ಭೇಟಿ ನೀಡಿರುವುದು ಭಕ್ತರಲ್ಲಿ ಸಂತಸ ಮೂಡಿಸಿದೆ. ಸನ್ನಿಧಿಯಲ್ಲಿ ಅವರ ಸರಳತೆ ಹಾಗೂ ಭಕ್ತಿಭಾವ ಸ್ಥಳೀಯರ ಗಮನ ಸೆಳೆಯಿತು.
ಸ್ಯಾಂಡಲ್ವುಡ್ನಲ್ಲಿ ‘ಡಿಂಪಲ್ ಕ್ವೀನ್’ ಎಂದೇ ಖ್ಯಾತಿ ಪಡೆದಿರುವ ರಚಿತಾ ರಾಮ್, ಈಗಾಗಲೇ ಕನ್ನಡ ಚಿತ್ರರಂಗದ ಬಹುತೇಕ ಪ್ರಮುಖ ನಟರೊಂದಿಗೆ ಅಭಿನಯಿಸಿ ತಮ್ಮದೇ ಆದ ಅಭಿಮಾನಿ ಬಳಗ ನಿರ್ಮಿಸಿಕೊಂಡಿದ್ದಾರೆ. ಅಭಿನಯದ ಜೊತೆಗೆ ತಮ್ಮ ನಗು ಮತ್ತು ಡಿಂಪಲ್ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ಅವರು ಸದ್ಯ ಹಲವು ದೊಡ್ಡ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಇದೀಗ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ‘ಕ್ರಿಮಿನಲ್’ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ನೀನಾಸಂ ಸತೀಶ್ ಜೊತೆಯ ‘ಅಯೋಗ್ಯ 2’ ಸಿನಿಮಾದಲ್ಲೂ ನಟಿಸುತ್ತಿದ್ದು, ಈ ಎರಡೂ ಚಿತ್ರಗಳ ಮೇಲೆ ಸಿನಿಪ್ರಿಯರ ನಿರೀಕ್ಷೆ ಹೆಚ್ಚಿದೆ.
ಕನ್ನಡದ ಹೊರತಾಗಿಯೂ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲೂ ರಚಿತಾ ರಾಮ್ ತಮ್ಮ ಸಿನಿ ಪಯಣವನ್ನು ವಿಸ್ತರಿಸುತ್ತಿದ್ದಾರೆ. ಹೊಸ ಭಾಷೆಗಳಲ್ಲಿನ ಪ್ರಾಜೆಕ್ಟ್ಗಳ ಯಶಸ್ಸಿಗಾಗಿ ಹಾಗೂ ಮುಂದಿನ ಸಿನಿ ಬದುಕಿಗೆ ದೈವ ಕೃಪೆ ಇರಲಿ ಎಂಬ ಸಂಕಲ್ಪದೊಂದಿಗೆ ಅವರು ಕೊರಗಜ್ಜ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎನ್ನಲಾಗಿದೆ.






