Kapu : ಕರಾವಳಿಯ ಸಂಸ್ಕೃತಿ, ಭಕ್ತಿ ಮತ್ತು ಪರಂಪರೆಯ ಅದ್ಭುತ ಸಂಯೋಜನೆಯಾದ ಬ್ರಹ್ಮಮುಗ್ಗೇರ್ಕಳ ಪಿಲಿಚಂಡಿ ದೈವಸ್ಥಾನದ ದ್ವೈವಾರ್ಷಿಕ ಪಿಲಿಕೋಲ ಶನಿವಾರ ಭಾರೀ ಭಕ್ತಿ ಭಾವದಿಂದ ನೆರವೇರಿತು. ಮಧ್ಯಾಹ್ನ 3 ಗಂಟೆಗೆ ಆರಂಭವಾದ ಈ ಅಪರೂಪದ ಆಚರಣೆ ಸಂಜೆವರೆಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು.
ಸಂಪ್ರದಾಯದಂತೆ ಹುಲಿ ವೇಷ ಧರಿಸುವ ದೈವ ನರ್ತಕನಿಗೆ ಮೊದಲು ಪವಿತ್ರ ಸ್ನಾನ ಮಾಡಿಸಿ, ಬಳಿಕ ತೆಂಗಿನ ಗರಿಯಿಂದ ನಿರ್ಮಿಸಿದ ವಿಶೇಷ ಪಂಜರದೊಳಗೆ ಬಣ್ಣಗಾರಿಕೆಗೆ ಕಳುಹಿಸಲಾಯಿತು. ದೇಹಕ್ಕೆ ಹುಲಿ ರೂಪದ ಬಣ್ಣ ಬಳಿದ ಬಳಿಕ ಪಟೇಲರ ಅನುಮತಿ ಪಡೆದು, ಪಿಲಿಚಂಡಿ ಮನೆಯವರು ತೀರ್ಥ ಚಿಮುಕಿಸುವ ಮೂಲಕ ದೈವ ನರ್ತಕನು ಪಂಜರದಿಂದ ಹೊರಬಂದು ಪಿಲಿಕೋಲಕ್ಕೆ ಚಾಲನೆ ನೀಡಿದರು.
ಅದಾದ ಬಳಿಕ ಪಿಲಿ ದೈವವು ಬ್ರಹ್ಮರಗುಂಡಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ, ಹಳೆ ಮಾರಿಯಮ್ಮ ಗುಡಿಯ ಸಮೀಪ ನೆಟ್ಟಿದ್ದ ಕಂಬವನ್ನೇರಿ ಅದರಲ್ಲಿದ್ದ ಕೋಳಿಯನ್ನು ಬಲಿಯಾಗಿ ಸ್ವೀಕರಿಸಿ ಬೇಟೆಯ ಸಂಪ್ರದಾಯ ನೆರವೇರಿಸಿತು. ಬಳಿಕ ವಿವಿಧ ಪ್ರದೇಶಗಳಿಗೆ ತೆರಳಿ ಹಾಲು ಹಾಗೂ ಸೀಯಾಳ ಸ್ವೀಕರಿಸುವ ಆಚರಣೆ ನಡೆಯಿತು.
ಪಿಲಿ ದೈವ ಮುಟ್ಟಿದರೆ ಕಂಟಕ ಉಂಟಾಗುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ, ಪಿಲಿ ವೇಷಧಾರಿ ಸಮೀಪಿಸುತ್ತಿದ್ದಂತೆ ಭಕ್ತರು ಎಲ್ಲೆಂದರಲ್ಲಿ ಓಡಾಡಿ ತಪ್ಪಿಸಿಕೊಳ್ಳುತ್ತಿದ್ದ ದೃಶ್ಯಗಳು ವಿಶೇಷ ಆಕರ್ಷಣೆಯಾಗಿದ್ದವು. ಭಯ ಮತ್ತು ಭಕ್ತಿಯ ಸಂಯೋಜನೆಯ ಈ ಕ್ಷಣಗಳು ಪಿಲಿಕೋಲದ ವೈಶಿಷ್ಟ್ಯವನ್ನು ಮತ್ತಷ್ಟು ಮೆರೆಯಿಸಿದವು.
ಇದಕ್ಕೂ ಮೊದಲು ದೈವಸ್ಥಾನದಲ್ಲಿ ಬಬ್ಬರ್ಯ, ಕೊಡಮಣಿತ್ತಾಯ, ನಂದಿಕೇಶ್ವರ, ಪಿದಾಯಿ ಪಿಲ್ಚಂಡಿ, ಬ್ರಹ್ಮರ ನೇಮ, ಮುಗೇರ್ಕಳ, ಶಕ್ತಿ ಸ್ವರೂಪಿಣಿ ತನ್ನಿಮಾನಿಗ, ಮದುಮಗ ಸೇರಿದಂತೆ ಅನೇಕ ಪರಿವಾರ ದೈವಗಳ ನೇಮೋತ್ಸವಗಳು ಸಂಪ್ರದಾಯಬದ್ಧವಾಗಿ ನಡೆದವು. ಉರಿ ಚೌಂಡಿ, ಕಡುಂಜಿ ಬಂಟ, ಗುಳಿಗ ದೈವದ ನೇಮಗಳೂ ಭಕ್ತರ ಗಮನ ಸೆಳೆದವು.
ದ್ವೈವಾರ್ಷಿಕ ಪಿಲಿಕೋಲವನ್ನು ಕಣ್ತುಂಬಿಕೊಳ್ಳಲು ಕರಾವಳಿಯ ವಿವಿಧ ಭಾಗಗಳಷ್ಟೇ ಅಲ್ಲದೆ Bengaluru, Kasaragod, Mumbai, ಮಲೆನಾಡು ಪ್ರದೇಶಗಳು ಹಾಗೂ ವಿದೇಶಗಳಿಂದಲೂ ಭಕ್ತರು ಆಗಮಿಸಿದ್ದು, ಕಾಪು ಪ್ರದೇಶವೇ ಭಕ್ತಿ ಸಂಭ್ರಮದ ಕೇಂದ್ರವಾಗಿತ್ತು.


