ಹೆಬ್ರಿ, ಜೂನ್ 13: ಹೆಬ್ರಿ ತಾಲೂಕಿನ ಪ್ರಮುಖ ರಸ್ತೆಗಳಲ್ಲಿ ಇತ್ತೀಚೆಗೆ ಕೈಗೊಳ್ಳಲಾದ ನೀರಾವರಿ ಯೋಜನೆಗಳ ಕಾಮಗಾರಿಗಳ ಹಿನ್ನೆಲೆಯಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಿ ನವೀಕರಿಸಲಾಗಿದ್ದ ರಸ್ತೆಗಳನ್ನು ಅಗೆದು ಪೈಪ್ಲೈನ್ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನಡೆಸಲಾಗಿದೆ. ಆದರೆ ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆಗಳನ್ನು ಸಮರ್ಪಕವಾಗಿ ಮರುನಿರ್ಮಿಸದೆ ಕೇವಲ ಕಾಟಾಚಾರದ ಪ್ಯಾಚ್ ವರ್ಕ್ ಮಾಡಿರುವುದರಿಂದ ಅನೇಕ ರಸ್ತೆಗಳು ಹೊಂಡ-ಗುಂಡಿಗಳಿಂದ ಹಾಗೂ ಅಸಮರ್ಪಕವಾಗಿ ನಿರ್ಮಾಣಗೊಂಡ ದೊಡ್ಡ ಗಾತ್ರದ ಹಂಪ್ಗಳಿಂದ ಕೂಡಿದ್ದು ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

ಮಳೆಗಾಲ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿನ ಹೊಂಡಗಳು ನೀರಿನಿಂದ ತುಂಬಿ ಕಾಣಿಸದ ಸ್ಥಿತಿ ನಿರ್ಮಾಣವಾಗಿದ್ದು, ವಾಹನ ಚಾಲಕರಿಗೆ ಗೊಂದಲ ಉಂಟಾಗುವ ಜೊತೆಗೆ ಅಪಘಾತಗಳ ಸಂಭವವೂ ಹೆಚ್ಚಾಗಿದೆ. ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ಹೆಬ್ರಿ ಜೆಡಿಎಸ್ ಅಧ್ಯಕ್ಷರಾದ ಶ್ರೀಕಾಂತ್ ಪೂಜಾರಿ ಕುಚ್ಚೂರು ಅವರು ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ರಸ್ತೆ ದುಸ್ಥಿತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಿಸಲಾದ ರಸ್ತೆಗಳನ್ನು ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಅಗೆದು ಬಳಿಕ ಸರಿಯಾದ ರೀತಿಯಲ್ಲಿ ಮರುಸ್ಥಾಪನೆ ಮಾಡದಿರುವುದು ಖಂಡನೀಯ. ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆಯನ್ನು ಮೂಲ ಸ್ಥಿತಿಗೆ ತರುವುದು ಇಲಾಖೆಯ ಜವಾಬ್ದಾರಿಯಾಗಿದ್ದು, ಜನರ ಸುರಕ್ಷತೆಯ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸ್ಥಳ ಪರಿಶೀಲನೆಗಾಗಿ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಬೊಮ್ಮೇಗೌಡ ಹಾಗೂ ಎಸ್ಎನ್ಸಿ ಸಹಾಯಕ ಪ್ರವೀಣ್ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ವ್ಯಕ್ತಪಡಿಸಿದ ಅಸಮಾಧಾನವನ್ನು ಆಲಿಸಿದ ಅಧಿಕಾರಿಗಳು, ರಸ್ತೆಗಳಲ್ಲಿ ಉಂಟಾಗಿರುವ ಹೊಂಡ-ಗುಂಡಿಗಳು ಹಾಗೂ ಅಸಮರ್ಪಕ ಹಂಪ್ಗಳನ್ನು ಆದ್ಯತೆಯ ಮೇರೆಗೆ ಶೀಘ್ರದಲ್ಲೇ ದುರಸ್ತಿಪಡಿಸಿ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಹೆಬ್ರಿ ತಾಲೂಕಿನ ವಿವಿಧ ಭಾಗಗಳಲ್ಲಿನ ರಸ್ತೆ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ, ಮಳೆಗಾಲದಲ್ಲಿ ಸಂಭವಿಸಬಹುದಾದ ಅಪಘಾತಗಳನ್ನು ತಡೆಗಟ್ಟಲು ಸಂಬಂಧಪಟ್ಟ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.





