ಬೆಂಗಳೂರು, ಜೂನ್ 15: ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ಸೋಮವಾರ ಶಬರಿಮಲೆ ಯಾತ್ರೆಯನ್ನು ಭಕ್ತಿಭಾವದಿಂದ ಆರಂಭಿಸಿದರು. ಕೇರಳದ ಪ್ರಸಿದ್ಧ ಶಬರಿಮಲೆ ಶ್ರೀ ಧರ್ಮಶಾಸ್ತಾ ದೇವಾಲಯಕ್ಕೆ ತೆರಳುತ್ತಿರುವ ಅವರು, ಮುಂಜಾನೆ ಕೊಚ್ಚಿಯ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಪವಿತ್ರ ಮಾಲೆ ಧರಿಸಿ ಯಾತ್ರೆಗೆ ಚಾಲನೆ ನೀಡಿದರು.
ಆಯ್ಯಪ್ಪ ಸ್ವಾಮಿಯ ಮೇಲಿನ ಅಪಾರ ಭಕ್ತಿ ಹಾಗೂ ಧಾರ್ಮಿಕ ನಂಬಿಕೆಯನ್ನು ಪ್ರತಿಬಿಂಬಿಸುವ ಈ ಯಾತ್ರೆಯಲ್ಲಿ ಕುಮಾರಸ್ವಾಮಿ ಅವರು ಕಟ್ಟು ನಿಟ್ಟಿನ ಆಚರಣೆಗಳೊಂದಿಗೆ ಭಾಗವಹಿಸುತ್ತಿದ್ದಾರೆ. ಸಂಜೆ ವೇಳೆಗೆ ಶಬರಿಮಲೆ ತಲುಪಲಿರುವ ಅವರು, ರಾತ್ರಿ ಸುಮಾರು 8 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲಿದ್ದಾರೆ.

ದರ್ಶನದ ಬಳಿಕ ಸುಮಾರು ಎರಡು ಗಂಟೆಗಳ ಕಾಲ ನಡೆಯಲಿರುವ ವಿಶೇಷ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿರುವ ಅವರು, ಪಡಿಪೂಜೆ ಸೇರಿದಂತೆ ವಿವಿಧ ಪೂಜೆ ಹಾಗೂ ಸೇವೆಗಳಲ್ಲಿ ಭಾಗವಹಿಸಲಿದ್ದಾರೆ. ಈ ಮೂಲಕ ದೇವರ ಕೃಪೆ ಮತ್ತು ಆಶೀರ್ವಾದ ಪಡೆಯಲಿದ್ದಾರೆ.
ಈ ಯಾತ್ರೆಯಲ್ಲಿ ಕುಮಾರಸ್ವಾಮಿ ಅವರೊಂದಿಗೆ ಮಾಜಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಶ್ರೀ ಸುರೇಶ್ ಬಾಬು ರವರು , ಮಾಜಿ ಸಚಿವರುಗಳಾದ ಶ್ರೀ ಸಿ ಎಸ್ ಪುಟ್ಟರಾಜುರವರು , ಶ್ರೀ ಸಾ.ರಾ. ಮಹೇಶ್ ರವರು, ವಿಧಾನ ಪರಿಷತ್ ಸದಸ್ಯರಾದ ಶ್ರೀ ಭೋಜೇಗೌಡರು, ಶಾಸಕರಾದ ಶರಣಗೌಡ ಕಂದಕೂರ ರವರು, ಮಾಜಿ ಶಾಸಕರಾದ ಮಾಗಡಿ ಮಂಜುನಾಥ್ ರವರು, ಮಾಜಿ ಶಾಸಕರು ಹಾಗೂ ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷರಾದ ಶ್ರೀ ಹೆಚ್ ಎಂ ರಮೇಶ್ ಗೌಡ ರವರು, ಪಕ್ಷದ ಇನ್ನಿತರ ಮುಖಂಡರು ಮತ್ತು ಶ್ರೀ ಹೆಚ್ ಡಿ ಕುಮಾರಸ್ವಾಮಿ ಅವರ ಕೇಂದ್ರ ಸಚಿವಾಲಯದ ಅಧಿಕಾರಿಗಳು ಹಾಗೂ ಭಕ್ತರು ಎಲ್ಲರೂ ಶಬರಿಮಲೆಯ ಸಾಂಪ್ರದಾಯಿಕ ಆಚರಣೆಗಳನ್ನು ಪಾಲಿಸಿಕೊಂಡು ಭಕ್ತಿಭಾವದಿಂದ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ.

ಶಬರಿಮಲೆ ಯಾತ್ರೆಯು ದಕ್ಷಿಣ ಭಾರತದ ಅತ್ಯಂತ ಮಹತ್ವದ ಧಾರ್ಮಿಕ ಯಾತ್ರೆಗಳಲ್ಲಿ ಒಂದಾಗಿದ್ದು, ಪ್ರತಿವರ್ಷ ಲಕ್ಷಾಂತರ ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಭೇಟಿ ನೀಡುತ್ತಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಈ ಯಾತ್ರೆ ರಾಜಕೀಯ ವಲಯದ ಗಮನ ಸೆಳೆಯುವುದರ ಜೊತೆಗೆ, ಅವರ ಧಾರ್ಮಿಕ ನಂಬಿಕೆ ಮತ್ತು ಭಕ್ತಿಯ ಅಭಿವ್ಯಕ್ತಿಯಾಗಿದೆ.
ಭಕ್ತರೊಂದಿಗೆ ಸಾಮಾನ್ಯ ಯಾತ್ರಿಕರಂತೆ ಭಾಗವಹಿಸಿರುವ ಕುಮಾರಸ್ವಾಮಿ ಅವರು, ಅಯ್ಯಪ್ಪ ಸ್ವಾಮಿಯ ದರ್ಶನದ ಮೂಲಕ ರಾಜ್ಯದ ಸುಖ-ಶಾಂತಿ, ಸಮೃದ್ಧಿ ಹಾಗೂ ಜನರ ಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.





