ಬಾಗಲಕೋಟೆ, ಜೂನ್ 13: ಹಲವು ವರ್ಷಗಳಿಂದ ಭೂಸ್ವಾಧೀನಕ್ಕೆ ಸಂಬಂಧಿಸಿದ ಪರಿಹಾರ ಧನ ದೊರೆಯದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತನೊಬ್ಬ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (ಬಿಟಿಡಿಎ) ಕಚೇರಿಯಲ್ಲಿ ಸಿಬ್ಬಂದಿಗೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಘಟನೆ ಶನಿವಾರ ನಡೆದಿದೆ.
ಬಾಗಲಕೋಟೆ ನಗರದ ದಡ್ಡೇನವರ ವೃತ್ತದ ಸಮೀಪ ರಸ್ತೆ ನಿರ್ಮಾಣ ಕಾಮಗಾರಿಗಾಗಿ ರೈತ ಬಸವರಾಜ ದೊಡ್ಡಮನಿ ಅವರ ಜಮೀನನ್ನು 2004ರಲ್ಲಿ ಭೂಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ ಭೂಮಿ ಕಳೆದುಕೊಂಡಿದ್ದರೂ ಸಮರ್ಪಕ ಪರಿಹಾರ ಧನ ಇನ್ನೂ ದೊರೆತಿಲ್ಲ ಎಂಬ ಆರೋಪದಿಂದ ಅವರು ತೀವ್ರ ಅಸಮಾಧಾನಗೊಂಡಿದ್ದರು ಎಂದು ತಿಳಿದುಬಂದಿದೆ.
ಬಿಟಿಡಿಎ ಕಚೇರಿಯಲ್ಲಿ ಹಕ್ಕುಪತ್ರ ವಿತರಣಾ ಸಭೆ ನಡೆಯುತ್ತಿದ್ದ ವೇಳೆ ತಮ್ಮ ಸಮಸ್ಯೆಗೆ ಪರಿಹಾರ ಸಿಗದಿರುವುದನ್ನು ಪ್ರಶ್ನಿಸಿದ ಬಸವರಾಜ ದೊಡ್ಡಮನಿ, ಮಾತಿನ ಚಕಮಕಿಯ ಬಳಿಕ ಬಿಟಿಡಿಎ ಕೇಸ್ ವರ್ಕರ್ ಅಂಕದ ಅವರ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಘಟನೆಯಿಂದ ಕೆಲಕಾಲ ಕಚೇರಿ ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಅಚ್ಚರಿಗೆ ಒಳಗಾದರು. ಬಳಿಕ ಸ್ಥಳದಲ್ಲಿದ್ದವರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಇದೇ ವೇಳೆ ದಲಿತ ಸಂಘರ್ಷ ಸಮಿತಿ (ಡಿಎಸ್ಎಸ್) ಕಾರ್ಯಕರ್ತರು ಸಹ ಬಿಟಿಡಿಎ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿದರು. ಭೂಸ್ವಾಧೀನಗೊಂಡ ರೈತರಿಗೆ ನ್ಯಾಯಯುತ ಪರಿಹಾರ ನೀಡುವಲ್ಲಿ ಪ್ರಾಧಿಕಾರ ವಿಫಲವಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಪ್ರಾಧಿಕಾರದ ಅಧ್ಯಕ್ಷರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಭೂಸ್ವಾಧೀನಕ್ಕೆ ಸಂಬಂಧಿಸಿದ ಬಾಕಿ ಪರಿಹಾರ ಧನ ಹಾಗೂ ರೈತರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಘಟನೆ ಸ್ಥಳೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ರೈತರ ಸಮಸ್ಯೆಗಳ ಕುರಿತು ಅಧಿಕಾರಿಗಳು ಗಂಭೀರವಾಗಿ ಗಮನಹರಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ.


