ಕಾರ್ಕಳ: ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಭಾಷೆಯ ಸಮಗ್ರ ಅಭಿವೃದ್ಧಿ, ಸಂರಕ್ಷಣೆ ಹಾಗೂ ಪ್ರಚಾರಕ್ಕಾಗಿ ರಾಜ್ಯ ಸರ್ಕಾರವು ಶೀಘ್ರವಾಗಿ ತುಳು ಅಭಿವೃದ್ಧಿ ನಿಗಮ (ಪ್ರಾಧಿಕಾರ) ಸ್ಥಾಪಿಸಬೇಕು ಹಾಗೂ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನಲ್ಲಿ ಸುಸಜ್ಜಿತ ತುಳು ಭವನ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆಗೊಳಿಸಬೇಕು ಎಂದು ಸಾಮಾಜಿಕ ಮುಖಂಡ ಮುನಿಯಾಲ್ ಉದಯ ಕುಮಾರ್ ಶೆಟ್ಟಿಯವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.

ತುಳು ಭಾಷೆಯು ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಪ್ರಾಚೀನ ದ್ರಾವಿಡ ಭಾಷೆಯಾಗಿದ್ದು, ಲಕ್ಷಾಂತರ ಜನರ ಮಾತೃಭಾಷೆಯಾಗಿದೆ. ತುಳುನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಜೀವನಶೈಲಿಯ ಅವಿಭಾಜ್ಯ ಅಂಗವಾಗಿರುವ ತುಳು ಭಾಷೆಯ ಬಳಕೆ ಜಾಗತೀಕರಣದ ಪ್ರಭಾವದಿಂದ ಕುಗ್ಗುತ್ತಿರುವ ಹಿನ್ನೆಲೆಯಲ್ಲಿ ಅದರ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸರ್ಕಾರ ವಿಶೇಷ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಯುನೆಸ್ಕೋ ಸಹ ಸಂರಕ್ಷಿಸಬೇಕಾದ ಭಾಷೆಗಳ ಪಟ್ಟಿಯಲ್ಲಿ ತುಳು ಭಾಷೆಯನ್ನು ಪರಿಗಣಿಸಿರುವ ಹಿನ್ನೆಲೆಯಲ್ಲಿ, ತುಳು ಭಾಷೆಯ ಉಳಿವು ಮತ್ತು ಬೆಳವಣಿಗೆಗಾಗಿ ವಿಶೇಷ ಯೋಜನೆಗಳನ್ನು ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ತುಳು ಅಭಿವೃದ್ಧಿ ನಿಗಮವನ್ನು ರಚಿಸಿ, ತುಳು ಭಾಷೆಯ ಸಂರಕ್ಷಣೆ ಮತ್ತು ಪ್ರಚಾರ, ತುಳು ಸಾಹಿತ್ಯ, ಸಂಶೋಧನೆ ಹಾಗೂ ಪ್ರಕಟಣೆಗಳಿಗೆ ಉತ್ತೇಜನ, ಶಾಲೆ-ಕಾಲೇಜುಗಳಲ್ಲಿ ತುಳು ಅಧ್ಯಯನಕ್ಕೆ ಪ್ರೋತ್ಸಾಹ, ಯಕ್ಷಗಾನ, ಭೂತಾರಾಧನೆ, ನಾಗಾರಾಧನೆ ಸೇರಿದಂತೆ ತುಳುನಾಡಿನ ಜಾನಪದ ಹಾಗೂ ಸಾಂಸ್ಕೃತಿಕ ಪರಂಪರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದೇ ವೇಳೆ ಕಾರ್ಕಳದಲ್ಲಿ ತುಳು ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಪರಂಪರೆಯ ಅಧ್ಯಯನ ಮತ್ತು ಪ್ರಚಾರಕ್ಕಾಗಿ ಸುಸಜ್ಜಿತ ತುಳು ಭವನ ನಿರ್ಮಾಣದ ಅಗತ್ಯತೆಯನ್ನು ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ. ತುಳುನಾಡಿನ ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿರುವ ಕಾರ್ಕಳದಲ್ಲಿ ತುಳು ಭವನ ನಿರ್ಮಾಣವಾದರೆ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂದು ತಿಳಿಸಿದ್ದಾರೆ.
ಪ್ರಸ್ತಾವಿತ ತುಳು ಭವನದಲ್ಲಿ ಗ್ರಂಥಾಲಯ, ಸಂಶೋಧನಾ ಕೇಂದ್ರ, ವಸ್ತುಸಂಗ್ರಹಾಲಯ, ಸಭಾಂಗಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವ ಮೂಲಕ ತುಳು ಭಾಷೆ ಮತ್ತು ಸಂಸ್ಕೃತಿಯ ಸಮಗ್ರ ಅಭಿವೃದ್ಧಿಗೆ ವೇದಿಕೆ ಒದಗಿಸಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆದ್ದರಿಂದ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನಲ್ಲಿ ಸರ್ಕಾರದ ವತಿಯಿಂದ ಸೂಕ್ತ ಜಾಗವನ್ನು ಗುರುತಿಸಿ, ಅಗತ್ಯ ಅನುದಾನ ಮಂಜೂರು ಮಾಡಿ ಶೀಘ್ರದಲ್ಲೇ ತುಳು ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಹಾಗೂ ತುಳು ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.








