ಮಂಗಳೂರು : ಮಾಜಿ ಪ್ರಧಾನಮಂತ್ರಿ, ಜೆಡಿಎಸ್ ಪಕ್ಷದ ವರಿಷ್ಠ ನಾಯಕ, ರಾಜಕೀಯ ಭೀಷ್ಮ, ಹಿರಿಯ ಮುತ್ಸದ್ದಿ ಹಾಗೂ “ಮಣ್ಣಿನ ಮಗ” ಎಂದೇ ಖ್ಯಾತರಾಗಿರುವ ಕರ್ನಾಟಕ ರತ್ನ ಶ್ರೀ ಹೆಚ್.ಡಿ. ದೇವೇಗೌಡ ಅವರ ಹುಟ್ಟುಹಬ್ಬದ ಅಂಗವಾಗಿ ದಕ್ಷಿಣಕನ್ನಡ ಜಿಲ್ಲಾ ಯುವ ಜನತಾದಳ (ಜಾತ್ಯತೀತ) ವತಿಯಿಂದ ನಿರಾಶ್ರಿತರಿಗೆ ಊಟ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಜನ್ಮದಿನವನ್ನು ಆಚರಿಸಲಾಯಿತು.
ದಕ್ಷಿಣಕನ್ನಡ ಜಿಲ್ಲಾ ಯುವ ಜನತಾದಳದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಅವರ ನೇತೃತ್ವದಲ್ಲಿ ನಗರದಲ್ಲಿರುವ ನಿರಾಶ್ರಿತರಿಗೆ ಅನ್ನಸಂತರ್ಪಣೆ ನಡೆಸಿ, ಸಮಾಜಮುಖಿ ಕಾರ್ಯದ ಮೂಲಕ ದೇವೇಗೌಡರವರ ಜನ್ಮದಿನಕ್ಕೆ ವಿಶೇಷ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ದಕ್ಷಿಣಕನ್ನಡ ಜಿಲ್ಲಾ ಯುವ ಜನತಾದಳದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಅವರು, “ಈ ದೇಶದ 11ನೇ ಪ್ರಧಾನಮಂತ್ರಿಯಾಗಿ ಹೆಚ್.ಡಿ. ದೇವೇಗೌಡರು ತಮ್ಮ ಅಧಿಕಾರಾವಧಿಯಲ್ಲಿ ರೈತಪರ, ಜನಪರ ಮತ್ತು ಅಭಿವೃದ್ಧಿ ಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮಹಿಳಾ ಮೀಸಲಾತಿ, ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಕೈಗೊಂಡ ಕ್ರಮಗಳು, ರೈತರಿಗೆ ರಸಗೊಬ್ಬರ ಸಬ್ಸಿಡಿ, ಕಾವೇರಿ ಹಾಗೂ ಮಹಾದಾಯಿ ನೀರಿನ ಹೋರಾಟಗಳಲ್ಲಿ ಅವರು ತೋರಿದ ಬದ್ಧತೆ ಇಂದಿನ ರಾಜಕಾರಣಿಗಳಿಗೆ ಹಾಗೂ ಯುವಜನತೆಗೆ ಮಾರ್ಗದರ್ಶನವಾಗಿದೆ. ರೈತರ ಬಗ್ಗೆ ಅವರಿಗಿದ್ದ ಅಪಾರ ಕಾಳಜಿ ಸದಾ ಸ್ಮರಣೀಯ. ಭಗವಂತರು ಅವರಿಗೆ ಇನ್ನಷ್ಟು ಆಯಸ್ಸು, ಉತ್ತಮ ಆರೋಗ್ಯ ನೀಡಿ ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿದರು.

ಜೆಡಿಎಸ್ ಹಿರಿಯ ಮುಖಂಡ ವಸಂತ್ ಪೂಜಾರಿ ಅವರು ಮಾತನಾಡಿ ದೇವೇಗೌಡರವರ ಸರಳತೆ, ರಾಜಕೀಯ ದೂರದೃಷ್ಟಿ ಹಾಗೂ ಜನಸೇವೆಯನ್ನು ಸ್ಮರಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ಮೀನುಗಾರ ಘಟಕದ ರಾಜ್ಯಾಧ್ಯಕ್ಷ ರತ್ನಾಕರ ಸುವರ್ಣ, ಯುವ ಜೆಡಿಎಸ್ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಾಧ್ಯಕ್ಷ ರತೀಶ್ ಕರ್ಕೇರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಿತೇಶ್ ರೈ, ಮಂಗಳೂರು ದಕ್ಷಿಣ ಕ್ಷೇತ್ರಾಧ್ಯಕ್ಷ ಸತ್ತಾರ್ ಬಂದರು ಸೇರಿದಂತೆ ಜಿಲ್ಲಾ ಮುಖಂಡರಾದ ವಿನ್ಸೆಂಟ್ ಸುರತ್ಕಲ್, ಪುಷ್ಪರಾಜ್, ಭಾರತಿ, ಕನಕದಾಸ ಕುಳೂರು, ಚೂಡಮಣಿ ಹಾಗೂ ಯುವ ಜೆಡಿಎಸ್ ಪದಾಧಿಕಾರಿಗಳಾದ ಸುಶಾಂತ್ ಪೂಜಾರಿ, ವಿಖ್ಯಾತ್, ಪ್ರೀತೇಶ್, ರಕ್ಷಿತ್, ವಿನಿತ್ ಪೂಜಾರಿ, ಆದರ್ಶ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

