ಮಂಗಳೂರು, ಮೇ 28–29: ವಿಶ್ವವಿಖ್ಯಾತ ಆದ್ಯತ್ಮಿಕ ನಾಯಕಿ ಮಾತಾ ಅಮೃತಾನಂದಮಯಿ ಅಮ್ಮ ಮಂಗಳೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ, ನಗರದ ಬೋಳೂರಿನಲ್ಲಿರುವ ಮಾತಾ ಅಮೃತಾನಂದಮಯಿ ಮಠದಲ್ಲಿ ಭಾನುವಾರ ಪೂರ್ವಭಾವಿ ಪ್ರಾರ್ಥನಾ ಸಭೆ ಭಕ್ತಿಭಾವದಿಂದ ಜರುಗಿತು.
ಕಾರ್ಯಕ್ರಮಕ್ಕೆ ಪೂರ್ವಾಹ್ನ ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ಶಿವಶಕ್ತಿ ಹೋಮದೊಂದಿಗೆ ಚಾಲನೆ ನೀಡಲಾಯಿತು. ಸ್ವಾಮಿನಿ ಮಂಗಳಾಮೃತ ಪ್ರಾಣ ಅವರ ಸಾನ್ನಿಧ್ಯದಲ್ಲಿ ಬ್ರಹ್ಮಚಾರಿ ರತೀಶ್ ಹೋಮ ನೆರವೇರಿಸಿದರು. ಅರ್ಚಕ ಗೋವಿಂದ ಸಹಕರಿಸಿದರು. ಬಳಿಕ ನಡೆದ “ಗುರುವಂದನ” ಕಾರ್ಯಕ್ರಮದಲ್ಲಿ ಸೇವಾ ಸಮಿತಿಯ ಅಧ್ಯಕ್ಷ ಸುರೇಶ್ ಅಮಿನ್ ದಂಪತಿಗಳು ಪಾದಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಸ್ವಾಮಿನಿ ಮಂಗಳಾಮೃತ ಪ್ರಾಣ, ಕಳೆದ ಏಳು ವರ್ಷಗಳಿಂದ ಅಮ್ಮನವರ ಆಗಮನಕ್ಕಾಗಿ ಭಕ್ತರು ಮತ್ತು ಸ್ವಯಂಸೇವಕರು ಅಪಾರ ಭಕ್ತಿಭಾವದಿಂದ ಕಾಯುತ್ತಿರುವುದಾಗಿ ತಿಳಿಸಿದರು. “ಅಮ್ಮನವರ ದರ್ಶನವು ಜೀವನದಲ್ಲಿ ನವಚೈತನ್ಯ ತುಂಬುವ ಅನುಭವ. ಮಂಗಳೂರಿನ ಮೇಲಿನ ವಿಶೇಷ ಒಲವಿನಿಂದ ಈ ಬಾರಿ ಇಲ್ಲಿ ದರ್ಶನದ ಸೌಭಾಗ್ಯ ದೊರೆತಿದೆ” ಎಂದರು. ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಸರ್ವರ ಸಹಕಾರ ಕೋರಿದರು.
ವಿಶೇಷ “ಉದಯಾಸ್ತಮಾನ” ಪೂಜಾ ಪ್ರಚಾರಕ್ಕೆ ಡಾ. ಜೀವರಾಜ್ ಸೊರಕೆ ಚಾಲನೆ ನೀಡಿದರು. ಲೇಖನ ಯಜ್ಞದ ಕುರಿತು ಡಾ. ವಸಂತ ಕುಮಾರ್ ಪೆರ್ಲ ಮಾಹಿತಿ ನೀಡಿದರು. ಸಾಮೂಹಿಕ ಲಲಿತಾ ಸಹಸ್ರನಾಮ ಪಠಣದ ಬಗ್ಗೆ ಕಲ್ಪನಾ ಭಾಸ್ಕರ್, ಸಿ.ಎ. ವಾಮನ್ ಕಾಮತ್, ಕೃಷ್ಣ ಶೆಟ್ಟಿ ಹಾಗೂ ಯುವ ಘಟಕ ‘ಅಯುಧ್’ ಅಧ್ಯಕ್ಷೆ ವಕೀಲೆ ಸ್ವಸ್ತಿ ಶೆಟ್ಟಿ ಕಾರ್ಯಕ್ರಮದ ರೂಪುರೇಷೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಸ್ವಯಂಸೇವಕರ ವಿವಿಧ ಘಟಕಗಳಿಗೆ ಪ್ರತ್ಯೇಕ ಚಾಲನೆ ನೀಡಲಾಯಿತು. ಅಧ್ಯಕ್ಷ ಸುರೇಶ್ ಅಮಿನ್ ಸ್ವಾಗತಿಸಿದರು. ಕೋಶಾಧಿಕಾರಿ ಸಿ.ಎ. ರಾಮನಾಥ್ ವಂದಿಸಿದರು. ಡಾ. ದೇವದಾಸ್ ಪೂಜನ್ ಕಾರ್ಯಕ್ರಮ ನಿರೂಪಿಸಿದರು.
ಗೋವಾ, ಕೊಡಗು, ಕಾರವಾರ, ಕುಂದಾಪುರ, ಶಿರೂರು, ಉಡುಪಿ, ಕಾರ್ಕಳ, ಸುಬ್ರಹ್ಮಣ್ಯ, ಸುಳ್ಯ, ಕಡಬ, ಮೂಡಬಿದ್ರೆ ಸೇರಿದಂತೆ ವಿವಿಧ ಪ್ರದೇಶಗಳಿಂದ ಸೇವಾ ಸಮಿತಿ ಪದಾಧಿಕಾರಿಗಳು, ಸ್ವಯಂಸೇವಕರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು. ಮಹಾ ಆರತಿ ಹಾಗೂ ಅನ್ನಪ್ರಸಾದ ವಿತರಣೆ ಮೂಲಕ ಕಾರ್ಯಕ್ರಮ ಸಮಾಪ್ತಿಯಾಯಿತು.






