ಉಳ್ಳಾಲ, ಜುಲೈ 5 (ತುಳುನಾಡ ಸೂರ್ಯ): ಉಳ್ಳಾಲ ಸಮೀಪದ ಕೋಟೆಕಾರ್ನಲ್ಲಿ ಉದ್ಯಮಿ, ಸಮಾಜಸೇವಕ ಹಾಗೂ ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯರಾದ ರಾಘವ ಗಟ್ಟಿ ಮತ್ತು ಭಾರತಿ ರಾಘವ ಗಟ್ಟಿ ದಂಪತಿಗಳ ಕನಸಿನ ಯೋಜನೆಯಾದ ನೂತನ ಆರ್.ಬಿ. ಕಾಂಪ್ಲೆಕ್ಸ್ (R.B. Complex) ಭಾನುವಾರ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವದ ನಡುವೆ ಲೋಕಾರ್ಪಣೆಗೊಂಡಿತು.
ಮಾಡೂರು ಶಿವದುರ್ಗಾಂಭ ಮಠದ ಪೂಜ್ಯ ದುರ್ಗಾನಂದ ಸ್ವಾಮೀಜಿ ಅವರು ವಾಣಿಜ್ಯ ಸಂಕೀರ್ಣವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಬಳಿಕ ಮಾತನಾಡಿದ ಅವರು, “ಯಶಸ್ವಿ ಉದ್ಯಮಿಯ ನಿಜವಾದ ಸಾಧನೆ ಸಮಾಜದ ಅಭಿವೃದ್ಧಿಯಲ್ಲಿ ಕಾಣಿಸಬೇಕು. ಉದ್ಯಮವು ಕೇವಲ ಲಾಭದ ವ್ಯವಹಾರವಾಗದೆ ಉದ್ಯೋಗ ಸೃಷ್ಟಿ, ಜನಸೇವೆ ಹಾಗೂ ಸಾಮಾಜಿಕ ಬದ್ಧತೆಯ ಪ್ರತೀಕವಾಗಬೇಕು. ಅಂತಹ ಉದ್ಯಮಗಳೇ ಸಮಾಜಕ್ಕೆ ಶಾಶ್ವತ ಕೊಡುಗೆ ನೀಡುತ್ತವೆ,” ಎಂದು ಹೇಳಿದರು. ನೂತನ ಆರ್.ಬಿ. ಕಾಂಪ್ಲೆಕ್ಸ್ ಸ್ಥಳೀಯ ವ್ಯಾಪಾರ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡುವುದರೊಂದಿಗೆ ಕೋಟೆಕಾರ್ ಭಾಗದ ಆರ್ಥಿಕ ಬೆಳವಣಿಗೆಗೆ ಪೂರಕವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಮಾತನಾಡಿ, ರಾಘವ ಗಟ್ಟಿ ಅವರು ಸಾರ್ವಜನಿಕ ಜೀವನ ಮತ್ತು ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದಾರೆ. ಅವರ ಈ ನೂತನ ಉದ್ಯಮ ಇನ್ನಷ್ಟು ಪ್ರಗತಿ ಹೊಂದಿ ಯಶಸ್ಸಿನ ಹೊಸ ಮೈಲಿಗಲ್ಲುಗಳನ್ನು ತಲುಪಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಮಾತನಾಡಿ, ರಾಘವ ಗಟ್ಟಿ ಮತ್ತು ಭಾರತಿ ರಾಘವ ಗಟ್ಟಿ ದಂಪತಿಗಳು ಸಮಾಜಮುಖಿ ಚಟುವಟಿಕೆಗಳ ಮೂಲಕ ಜನರ ವಿಶ್ವಾಸ ಗಳಿಸಿರುವುದು ಶ್ಲಾಘನೀಯ. ಉದ್ಯಮದ ಜೊತೆಗೆ ಸಾಮಾಜಿಕ ಕಾಳಜಿಯನ್ನೂ ಬೆಳೆಸುತ್ತಿರುವ ಇವರ ಸೇವಾ ಮನೋಭಾವ ಇತರ ಉದ್ಯಮಿಗಳಿಗೆ ಮಾದರಿಯಾಗಿದ್ದು, ನೂತನ ಆರ್.ಬಿ. ಕಾಂಪ್ಲೆಕ್ಸ್ ಯಶಸ್ಸಿನ ಉತ್ತುಂಗಕ್ಕೇರಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಚಂದ್ರಶೇಖರ್ ಉಚ್ಚಿಲ, ಸತ್ಯಶಂಕರ ಬೊಳ್ಳವ, ಉಳ್ಳಾಲ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಜಗದೀಶ್, ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷೆ ದಿವ್ಯ ಸತೀಶ್ ಶೆಟ್ಟಿ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಉದ್ಯಮಿಗಳು, ಗಣ್ಯರು, ಸಾರ್ವಜನಿಕರು ಹಾಗೂ ಅಪಾರ ಸಂಖ್ಯೆಯ ಸ್ಥಳೀಯರು ಭಾಗವಹಿಸಿ ನೂತನ ವಾಣಿಜ್ಯ ಸಂಕೀರ್ಣಕ್ಕೆ ಶುಭ ಹಾರೈಸಿದರು.

ಸಮಾರಂಭದ ಅಂಗವಾಗಿ ಕಟ್ಟಡ ನಿರ್ಮಾಣದಲ್ಲಿ ಶ್ರಮಿಸಿದ ಇಂಜಿನಿಯರ್ಗಳು, ಗುತ್ತಿಗೆದಾರರು, ಕಾರ್ಮಿಕರು ಹಾಗೂ ಪತ್ರಕರ್ತರಾದ ಶಶಿಧರ್ ಪೋಯತಬೈಲ್, ದಿನೇಶ್ ನಾಯಕ್ , ಆಸೀಫ್ ಮತ್ತು ವಿವಿಧ ರೀತಿಯಲ್ಲಿ ಸಹಕರಿಸಿದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಗೋಪಿನಾಥ್ ಬಗಂಬಿಲ ಅವರು ಅಚ್ಚುಕಟ್ಟಾಗಿ ನಿರೂಪಿಸಿದರು. ಸ್ಥಳೀಯ ನಾಗರಿಕರು, ವ್ಯಾಪಾರಸ್ಥರು, ಬಂಧು-ಬಳಗ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಕ್ರಿಯ ಭಾಗವಹಿಸುವಿಕೆಯಿಂದ ಉದ್ಘಾಟನಾ ಸಮಾರಂಭವು ಸಂಭ್ರಮ, ಸೌಹಾರ್ದತೆ ಮತ್ತು ಯಶಸ್ಸಿನ ವಾತಾವರಣದಲ್ಲಿ ನೆರವೇರಿತು.
ನೂತನ ಆರ್.ಬಿ. ಕಾಂಪ್ಲೆಕ್ಸ್ ಕೋಟೆಕಾರ್ ಪ್ರದೇಶದ ವಾಣಿಜ್ಯ ಚಟುವಟಿಕೆಗಳಿಗೆ ಹೊಸ ಆಯಾಮ ನೀಡುವ ನಿರೀಕ್ಷೆ ಮೂಡಿಸಿದ್ದು, ಸ್ಥಳೀಯ ವ್ಯಾಪಾರಾಭಿವೃದ್ಧಿಗೆ ಮಹತ್ವದ ಕೊಡುಗೆಯಾಗಲಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

