ಉಡುಪಿ, ಜುಲೈ 5: ಅಜ್ಜರಕಾಡಿನ ನೂತನ ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ತಕ್ಷಣವೇ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಗೊಳಿಸಿ, ಜಿಲ್ಲೆಯ ಸಾರ್ವಜನಿಕರಿಗೆ ಗುಣಮಟ್ಟದ ಹಾಗೂ ಸಮಗ್ರ ಆರೋಗ್ಯ ಸೇವೆಯನ್ನು ಒದಗಿಸಬೇಕು ಎಂದು ಆಗ್ರಹಿಸಿ ತುಳುನಾಡು ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕವು ಆರೋಗ್ಯ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿತ್ತು.
ಉಡುಪಿ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಸಚಿವರನ್ನು ಭೇಟಿ ಮಾಡಿದ ವೇದಿಕೆಯ ಪದಾಧಿಕಾರಿಗಳು, ಅಜ್ಜರಕಾಡಿನಲ್ಲಿ ನಿರ್ಮಾಣಗೊಂಡಿರುವ ನೂತನ ಜಿಲ್ಲಾ ಆಸ್ಪತ್ರೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಜ್ಜುಗೊಂಡಿದ್ದರೂ, ಆಸ್ಪತ್ರೆಯ ಎಲ್ಲಾ ವಿಭಾಗಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸದಿರುವುದು ಸಾರ್ವಜನಿಕರಲ್ಲಿ ತೀವ್ರ ನಿರಾಸೆ ಮೂಡಿಸಿದೆ ಎಂದು ತಿಳಿಸಿದರು.

ಜಿಲ್ಲೆಯ ಸಾವಿರಾರು ಬಡವರು, ಕಾರ್ಮಿಕರು, ರೈತರು, ಹಿರಿಯ ನಾಗರಿಕರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರು ಸರ್ಕಾರಿ ಆಸ್ಪತ್ರೆಗಳನ್ನೇ ಅವಲಂಬಿಸಿರುವುದರಿಂದ ಸಮರ್ಪಕ ಆರೋಗ್ಯ ಸೇವೆ ಲಭ್ಯವಾಗದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಅನಿವಾರ್ಯವಾಗಿ ದುಬಾರಿ ಖಾಸಗಿ ಆಸ್ಪತ್ರೆಗಳ ಮೊರೆ ಹೋಗಬೇಕಾಗಿ ಬರುತ್ತಿದ್ದು, ಚಿಕಿತ್ಸೆಗಾಗಿ ಸಾಲದ ಮೊರೆ ಹೋಗುವ ಪರಿಸ್ಥಿತಿ ಅನೇಕ ಕುಟುಂಬಗಳಿಗೆ ಎದುರಾಗುತ್ತಿದೆ ಎಂದು ವೇದಿಕೆ ಆತಂಕ ವ್ಯಕ್ತಪಡಿಸಿತು.
ನೂತನ ಜಿಲ್ಲಾ ಆಸ್ಪತ್ರೆಯಲ್ಲಿ ಅಗತ್ಯ ಸಂಖ್ಯೆಯ ವೈದ್ಯರು, ತಜ್ಞ ವೈದ್ಯರು, ಶುಶ್ರೂಷಕರು, ತಾಂತ್ರಿಕ ಸಿಬ್ಬಂದಿ ಹಾಗೂ ಇತರೆ ಸಿಬ್ಬಂದಿಯನ್ನು ತಕ್ಷಣ ನೇಮಕಗೊಳಿಸಿ, ಹೊರರೋಗಿ ಮತ್ತು ಒಳರೋಗಿ ಸೇವೆಗಳು, ತುರ್ತು ಚಿಕಿತ್ಸಾ ಘಟಕ, ಪ್ರಯೋಗಾಲಯ, ಸ್ಕ್ಯಾನಿಂಗ್ ಸೇರಿದಂತೆ ಎಲ್ಲಾ ಚಿಕಿತ್ಸಾ ವಿಭಾಗಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಇದರೊಂದಿಗೆ ಉಡುಪಿ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಸರ್ಕಾರಿ ಆಸ್ಪತ್ರೆಗಳ ಮೂಲಸೌಕರ್ಯವನ್ನು ಬಲಪಡಿಸಿ, ವೈದ್ಯರ ಕೊರತೆ, ಸಿಬ್ಬಂದಿ ಅಭಾವ, ಔಷಧಗಳ ಕೊರತೆ ಹಾಗೂ ವೈದ್ಯಕೀಯ ಉಪಕರಣಗಳ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವ ಮೂಲಕ ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸಬೇಕೆಂದು ವೇದಿಕೆ ಆಗ್ರಹಿಸಿದೆ.
ಆರೋಗ್ಯ ಸಚಿವರಾಗಿರುವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಯು.ಟಿ. ಖಾದರ್ ಅವರು ಈ ವಿಷಯಕ್ಕೆ ವಿಶೇಷ ಆದ್ಯತೆ ನೀಡಿ, ಸಂಬಂಧಪಟ್ಟ ಅಧಿಕಾರಿಗಳಿಗೆ ತುರ್ತು ನಿರ್ದೇಶನ ನೀಡಿ ಅಜ್ಜರಕಾಡಿನ ನೂತನ ಜಿಲ್ಲಾ ಆಸ್ಪತ್ರೆಯನ್ನು ಶೀಘ್ರದಲ್ಲೇ ಸಂಪೂರ್ಣ ಸಾಮರ್ಥ್ಯದೊಂದಿಗೆ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಬೇಕು. ಜೊತೆಗೆ ಜಿಲ್ಲೆಯ ಸರ್ಕಾರಿ ಆರೋಗ್ಯ ಸೇವೆಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಿ, ಎಲ್ಲ ವರ್ಗದ ಜನರಿಗೆ ಗುಣಮಟ್ಟದ, ಕೈಗೆಟುಕುವ ಹಾಗೂ ಸುಲಭವಾಗಿ ಲಭ್ಯವಾಗುವ ಆರೋಗ್ಯ ಸೇವೆಯನ್ನು ಖಚಿತಪಡಿಸಬೇಕು ಎಂದು ತುಳುನಾಡು ರಕ್ಷಣಾ ವೇದಿಕೆ ಮನವಿಯಲ್ಲಿ ಒತ್ತಾಯಿಸಿದೆ.
ಮನವಿ ಸಲ್ಲಿಸಿದ ಸಂದರ್ಭದಲ್ಲಿ ತುಳುನಾಡು ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಪ್ರಾಂಕಿ ಡಿಸೋಜ ಕೊಳಲಗಿರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಹಾವಂಜೆ, ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ ಜಯ ಪೂಜಾರಿ ಲಕ್ಷ್ಮಿನಗರ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ನಾಗಲಕ್ಷ್ಮಿ, ಕಾಪು ತಾಲೂಕು ಅಧ್ಯಕ್ಷ ನಿತಿನ್ ಕುಮಾರ್ ಶೆಟ್ಟಿ, ಕಾಪು ಮಹಿಳಾ ಘಟಕ ಅಧ್ಯಕ್ಷೆ ಅನುಸೂಯಾ ಶೆಟ್ಟಿ, ಬೈರಂಪಳ್ಳಿ ಘಟಕ ಅಧ್ಯಕ್ಷ ಕೃಷ್ಣಾನಂದ ನಾಯಕ್ ಹಾಗೂ ವೇದಿಕೆಯ ಮುಖಂಡರಾದ ಗುಣಾಕಾರ, ಪ್ರೀತಮ್ ಕಟಪಾಡಿ, ಶಂಕರ್ ಉಡುಪಿ, ಮನೋಜ್ ಕೆ.ಜಿ. ರೋಡ್, ಸುಬ್ರಮಣ್ಯ ಸರಳಬೆಟ್ಟು, ಕೃಷ್ಣಾನಂದ ಪೂಜಾರಿ, ಗಣೇಶ್ ಕುಲಾಲ್ ಬೈರಂಪಳ್ಳಿ, ಶಿವಕುಮಾರ್ ಪೂಜಾರಿ ಬೈರಂಪಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.




