ತುಮಕೂರು: ಬೆಂಗಳೂರಿಗೆ ತೆರಳುವ ವೇಳೆ ಮಾರ್ಗ ಮಧ್ಯೆ ಸಚಿವ ಶಿವರಾಜ್ ತಂಗಡಗಿ ಅವರಿಗೆ ಅಚಾನಕ್ ಎದೆನೋವು ಕಾಣಿಸಿಕೊಂಡ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ತಕ್ಷಣ ಎಚ್ಚರಿಕೆ ವಹಿಸಿದ ಕಾರು ಚಾಲಕ, ಯಾವುದೇ ವಿಳಂಬ ಮಾಡದೇ ಅವರನ್ನು ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಿದರು.
ಮೂಲಗಳ ಪ್ರಕಾರ, ಸಚಿವರು ತಮ್ಮ ಕಾರು ಚಾಲಕ ಹಾಗೂ ಗನ್ಮ್ಯಾನ್ ಜೊತೆ ಬೆಳಿಗ್ಗೆ ಸುಮಾರು 10 ಗಂಟೆ ಸುಮಾರಿಗೆ ಕೊಪ್ಪಳದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಏಕಾಏಕಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆ, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಾಲಕ ಸಮೀಪದಲ್ಲಿದ್ದ ಆಸ್ಪತ್ರೆಗೆ ಕರೆದೊಯ್ಯುವ ನಿರ್ಧಾರ ಕೈಗೊಂಡರು.
ಸದ್ಯ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಸಚಿವ ಶಿವರಾಜ್ ತಂಗಡಗಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ವೈದ್ಯರ ತಂಡ ಸಮಗ್ರ ಪರಿಶೀಲನೆ ನಡೆಸುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ವಿಷಯ ತಿಳಿದು ಬಂದ ತಕ್ಷಣ ಸಂಬಂಧಿತ ಅಧಿಕಾರಿಗಳು ಹಾಗೂ ಅಭಿಮಾನಿಗಳು ಆಸ್ಪತ್ರೆಗೆ ಆಗಮಿಸಿ ಸಚಿವರ ಆರೋಗ್ಯ ವಿಚಾರಿಸಿದ್ದಾರೆ. ವೈದ್ಯರು ಮುಂದಿನ ಕೆಲವು ಗಂಟೆಗಳ ಕಾಲ ಅವರ ಆರೋಗ್ಯವನ್ನು ನಿಗಾದಲ್ಲಿ ಇಟ್ಟು ಹೆಚ್ಚಿನ ಪರೀಕ್ಷೆಗಳು ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಘಟನೆ ಸಚಿವರ ಅಭಿಮಾನಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದರೂ, ಅವರ ಸ್ಥಿತಿ ಸ್ಥಿರವಾಗಿದೆ ಎಂಬ ಮಾಹಿತಿ ಸ್ವಲ್ಪ ನಿರಾಳತೆ ತಂದಿದೆ.


