ಮಂಗಳೂರು : ಮುಲ್ಕಿಯನ್ನು ಸ್ವತಂತ್ರ ತಾಲೂಕು ಕೇಂದ್ರವನ್ನಾಗಿ ಘೋಷಿಸುವ ಮೂಲಕ ಈ ಭಾಗದ ಅಭಿವೃದ್ಧಿಗೆ ಮಹತ್ವದ ಹೆಜ್ಜೆ ಇಟ್ಟಿರುವ H. D. Kumaraswamy, ಗೌರವಾನ್ವಿತ ಕೇಂದ್ರ ಸಚಿವರು ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಿಗೆ ಮುಲ್ಕಿಯ ಜನತೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯ ಉಪಾದ್ಯಕ್ಷ ಮತ್ತು ವಕ್ತಾರ M. B. Sadashiva ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, 2019ರಲ್ಲಿ ಮುಲ್ಕಿಯನ್ನು ಸ್ವತಂತ್ರ ತಾಲೂಕು ಕೇಂದ್ರವನ್ನಾಗಿ ಘೋಷಿಸಿದ ಹೆಚ್.ಡಿ. ಕುಮಾರಸ್ವಾಮಿ ಅವರ ಐತಿಹಾಸಿಕ ತೀರ್ಮಾನವು ಈ ಭಾಗದ ಆಡಳಿತಾತ್ಮಕ ವ್ಯವಸ್ಥೆಗೆ ಹೊಸ ದಿಕ್ಕು ನೀಡಿದ ಮಹತ್ವದ ನಿರ್ಧಾರವಾಗಿದೆ ಎಂದು ಹೇಳಿದರು. ಈ ನಿರ್ಧಾರದಿಂದ ಮುಲ್ಕಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ಆಡಳಿತಾತ್ಮಕ ಸೇವೆಗಳು ಸುಲಭವಾಗಿ ಲಭ್ಯವಾಗುವಂತಾಗಿದೆ. ಜನರು ಹಿಂದೆ ದೂರದ ಪ್ರದೇಶಗಳಿಗೆ ತೆರಳಿ ಸರ್ಕಾರಿ ಕೆಲಸಗಳನ್ನು ನಿರ್ವಹಿಸಬೇಕಾದ ಪರಿಸ್ಥಿತಿ ಇತ್ತು. ಆದರೆ ತಾಲೂಕು ಘೋಷಣೆಯ ನಂತರ ಸ್ಥಳೀಯ ಮಟ್ಟದಲ್ಲೇ ವಿವಿಧ ಇಲಾಖೆಗಳ ಸೇವೆಗಳು ದೊರೆಯುತ್ತಿರುವುದು ಜನತೆಗೆ ಬಹು ದೊಡ್ಡ ಅನುಕೂಲವಾಗಿದೆ ಎಂದು ಅವರು ತಿಳಿಸಿದರು.
ಹೆಚ್.ಡಿ. ಕುಮಾರಸ್ವಾಮಿ ಅವರು ಸದಾ ಜನಸಾಮಾನ್ಯರ ಹಿತವನ್ನು ಗಮನದಲ್ಲಿಟ್ಟುಕೊಂಡು ದೂರದೃಷ್ಟಿಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಜನನಾಯಕರು. ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಅವಧಿಯಲ್ಲಿ ಗ್ರಾಮೀಣ ಅಭಿವೃದ್ಧಿ, ರೈತರ ಕಲ್ಯಾಣ, ಆಡಳಿತ ಸುಧಾರಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವರು ಕೈಗೊಂಡ ಕಾರ್ಯಕ್ರಮಗಳು ಜನಮನದಲ್ಲಿ ಇಂದಿಗೂ ಸ್ಮರಣೀಯವಾಗಿವೆ ಎಂದು ಹೇಳಿದರು.
“ನಿಮ್ಮ ದೂರದೃಷ್ಟಿ – ನಮ್ಮ ಅಭಿವೃದ್ಧಿ” ಎಂಬ ಧ್ಯೇಯದೊಂದಿಗೆ ತೆಗೆದುಕೊಳ್ಳಲಾದ ಮುಲ್ಕಿ ತಾಲೂಕು ಘೋಷಣೆ ಈ ಭಾಗದ ಸಮಗ್ರ ಅಭಿವೃದ್ಧಿಗೆ ಬುನಾದಿಯಾಗಿದ್ದು, ಮುಲ್ಕಿಯ ಜನತೆ ಈ ಐತಿಹಾಸಿಕ ತೀರ್ಮಾನಕ್ಕಾಗಿ ಸದಾ ಋಣಿಯಾಗಿರುತ್ತಾರೆ ಎಂದು ಎಂ.ಬಿ. ಸದಾಶಿವ ತಿಳಿಸಿದ್ದಾರೆ.
ಸರಳತೆ ಮತ್ತು ಸಜ್ಜನಿಕೆಯಿಂದ ಜನಮನ ಗೆದ್ದಿರುವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮುಲ್ಕಿಯ ಸಮಸ್ತ ಹಿತೈಷಿಗಳು ಮತ್ತು ನಾಗರಿಕರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಕೃತಜ್ಞತಾ ಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




