ಉಡುಪಿ: ನಗರದ ಹೃದಯ ಭಾಗದಲ್ಲಿರುವ ಸರ್ವಿಸ್ ಬಸ್ ನಿಲ್ದಾಣದ ಅವ್ಯವಸ್ಥೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಉಡುಪಿ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ ನಗರಸಭೆ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಉಡುಪಿ ಸರ್ವಿಸ್ ಬಸ್ ನಿಲ್ದಾಣಕ್ಕೆ ಪ್ರತಿದಿನ ಸಾವಿರಾರು ಪ್ರಯಾಣಿಕರು ಆಗಮಿಸುತ್ತಾರೆ. ಆದರೆ ಮೂಲಭೂತ ಸೌಕರ್ಯಗಳ ಕೊರತೆಯಿಂದ ನಿಲ್ದಾಣವು ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ. ಕುಡಿಯುವ ನೀರಿನ ಘಟಕ ಅಶುದ್ಧವಾಗಿದ್ದು, ಪ್ರಯಾಣಿಕರು ಹಣ ಕೊಟ್ಟು ನೀರು ಖರೀದಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಯಾಣಿಕರಿಗಾಗಿ ಅಳವಡಿಸಿರುವ ಕುರ್ಚಿಗಳಲ್ಲಿ ಹಲವು ಮುರಿದು ಬಿದ್ದಿದ್ದು, ಸಮರ್ಪಕ ಆಸನ ವ್ಯವಸ್ಥೆ ಇಲ್ಲದ ಕಾರಣ ವೃದ್ಧರು, ಮಹಿಳೆಯರು ಹಾಗೂ ಮಕ್ಕಳಿಗೆ ತೀವ್ರ ತೊಂದರೆ ಉಂಟಾಗಿದೆ. ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ಶೌಚಾಲಯಗಳಿದ್ದರೂ ಅವು ನಿರ್ವಹಣೆಯ ಕೊರತೆಯಿಂದ ನಿರುಪಯುಕ್ತವಾಗಿವೆ. ಕಳಪೆ ಕಾಮಗಾರಿ ಹಾಗೂ ಸ್ವಚ್ಛತೆಯ ಅಭಾವದಿಂದ ಸುತ್ತಮುತ್ತ ದುರ್ವಾಸನೆ ವ್ಯಾಪಿಸಿದೆ.
ನಿಲ್ದಾಣದ ಆವರಣದಲ್ಲಿ ಧೂಳು, ಕಸದ ರಾಶಿ ಹಾಗೂ ತಿಂಡಿ ಪೊಟ್ಟಣಗಳ ಅವಶೇಷಗಳು ಎಲ್ಲೆಡೆ ಕಂಡುಬರುತ್ತಿವೆ. ಇದೇ ಪರಿಸ್ಥಿತಿಯಲ್ಲಿ ಪ್ರಯಾಣಿಕರು ನಿಂತು ಬಸ್ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಸಾರ್ವಜನಿಕರಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಒಟ್ಟಾರೆ ಬಸ್ ನಿಲ್ದಾಣದ ದುಸ್ಥಿತಿಯಿಂದ ಸಾರ್ವಜನಿಕರಲ್ಲಿ ಅಸಮಾಧಾನ ಉಂಟಾಗಿದ್ದು, ನಗರಸಭೆ ತಕ್ಷಣ ಸ್ವಚ್ಛತೆ, ಕುಡಿಯುವ ನೀರು, ಆಸನ ವ್ಯವಸ್ಥೆ ಹಾಗೂ ಶೌಚಾಲಯ ನಿರ್ವಹಣೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸುಜಯ್ ಪೂಜಾರಿ ಒತ್ತಾಯಿಸಿದ್ದಾರೆ.


