ಮಂಗಳೂರು : ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಕೊಡಿಯಾಲ್ ಬೈಲ್ ವಾರ್ಡಿನ ತಾಳಿಪಾಡಿ ಮನೆ ಎದುರಿನ ಶರಾವತಿ ಅಪಾರ್ಟ್ಮೆಂಟ್ ಸಮೀಪದ ರಾಜಕಾಲುವೆಗೆ ಸುಮಾರು ₹30 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ತಡೆಗೋಡೆ ಕಾಮಗಾರಿಗೆ ಶಾಸಕ D. Vedavyas Kamath ನೇತೃತ್ವದಲ್ಲಿ ಶಿಲಾನ್ಯಾಸ ನೆರವೇರಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಮಳೆಗಾಲದ ಸಂದರ್ಭಗಳಲ್ಲಿ ರಾಜಕಾಲುವೆಯಲ್ಲಿ ನೀರು ಉಕ್ಕಿ ಹರಿದು ಸ್ಥಳೀಯ ನಿವಾಸಿಗಳು ಪ್ರತಿವರ್ಷ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಸ್ಥಳೀಯರ ದೀರ್ಘಕಾಲದ ಬೇಡಿಕೆಗೆ ಸ್ಪಂದಿಸಿ ಇದೀಗ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
“ಈ ಕಾಮಗಾರಿ ಶೀಘ್ರ ಪೂರ್ಣಗೊಂಡು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂಬ ವಿಶ್ವಾಸವಿದೆ. ಜೊತೆಗೆ ಸಮೀಪದ ಎಂ.ಜಿ ರಸ್ತೆಯ ಭಾಗದಲ್ಲಿ ನಿರ್ಮಾಣವಾಗಲಿರುವ ಸೇತುವೆ ಕಾಮಗಾರಿಗೂ ಸುಮಾರು ₹2 ಕೋಟಿ ಅನುದಾನ ಮೀಸಲಿರಿಸಲಾಗಿದೆ. ಆ ಯೋಜನೆ ಪೂರ್ಣಗೊಂಡರೆ ನೀರು ಸರಾಗವಾಗಿ ಹರಿದು ಕೃತಕ ನೆರೆ ಸಮಸ್ಯೆ ಬಹುಮಟ್ಟಿಗೆ ಕಡಿಮೆಯಾಗುವ ಸಾಧ್ಯತೆಯಿದೆ” ಎಂದು ತಿಳಿಸಿದರು.
ಈ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ವಿಷಯ ತರಲಾಗಿದೆ. ಕೆಲ ಹಿತಾಸಕ್ತಿಗಳಿಂದ ಕಾಮಗಾರಿ ವಿಳಂಬವಾಗುತ್ತಿದ್ದರೂ, ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ನಿರಂತರ ಪ್ರಯತ್ನ ಮುಂದುವರಿಸಲಾಗುವುದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಯಶವಂತ ಕುದ್ರೋಳಿ, ಚಂದ್ರಶೇಖರ ಶೆಟ್ಟಿ, ಸಿದ್ಧಾರ್ಥ್, ಜೀವಿತ್, ಮೀರಾ ಶೆಟ್ಟಿ, ಭಾರತಿ ಶೆಟ್ಟಿ, ಜಗನ್ನಾಥ್ ಶೆಟ್ಟಿ ಸೇರಿದಂತೆ ಸ್ಥಳೀಯ ಪ್ರಮುಖರು ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.

