ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಿನ್ನಿಪದವಿನ ಲೈಕೋರಿಸ್ ಟೌನ್ ಫ್ಲಾಟ್ನಲ್ಲಿ ಆಯೋಜಿಸಲಾದ ಬೃಹತ್ ರಕ್ತದಾನ ಶಿಬಿರವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಶಿಬಿರದಲ್ಲಿ ವಿವಿಧ ಸಮುದಾಯಗಳ ಜನರು ಸ್ವಯಂಪ್ರೇರಿತರಾಗಿ ಭಾಗವಹಿಸಿ ಒಟ್ಟು 153 ಯುನಿಟ್ ರಕ್ತದಾನ ಮಾಡುವ ಮೂಲಕ ಮಾನವೀಯ ಸೇವೆಯ ಮಹತ್ವವನ್ನು ಸಾರಿದರು. ಜಾತಿ, ಧರ್ಮ ಹಾಗೂ ರಾಜಕೀಯ ಭೇದಗಳನ್ನು ಮೀರಿ ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸಿದ ರಕ್ತದಾನಿಗಳ ಸೇವಾಭಾವನೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲು ಎಸ್ಡಿಪಿಐ ಬಜಪೆ ಸಮಿತಿಯ ಪದಾಧಿಕಾರಿಗಳು, ಕಾರ್ಯಕರ್ತರು, ಯುವಕರು ಹಾಗೂ ಸ್ವಯಂಸೇವಕರು ಶ್ರಮವಹಿಸಿದ್ದು, ಶಿಬಿರದ ಯಶಸ್ಸಿಗೆ ಸಹಕರಿಸಿದ ವೈದ್ಯಕೀಯ ಸಿಬ್ಬಂದಿ ಮತ್ತು ಎಲ್ಲ ಸಹಯೋಗಿಗಳಿಗೂ ಸಮಿತಿಯು ಕೃತಜ್ಞತೆ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಎಸ್ಡಿಪಿಐ ಮುಖಂಡರು, “ರಕ್ತದಾನವು ಜೀವದಾನಕ್ಕೆ ಸಮಾನವಾದ ಮಹತ್ತರ ಸೇವೆಯಾಗಿದ್ದು, ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಮುಂದೆಯೂ ನಿರಂತರವಾಗಿ ಆಯೋಜಿಸಲಾಗುವುದು” ಎಂದು ತಿಳಿಸಿದರು.

ಶಿಬಿರದಲ್ಲಿ ರಕ್ತದಾನ ಮಾಡಿದ ಎಲ್ಲಾ 153 ಮಂದಿ ರಕ್ತದಾನಿಗಳಿಗೆ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದ ಸಾರ್ವಜನಿಕರಿಗೆ, ಪಕ್ಷದ ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ ಹಾಗೂ ಸ್ವಯಂಸೇವಕರಿಗೆ ಎಸ್ಡಿಪಿಐ ಬಜಪೆ ಸಮಿತಿಯು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದೆ.





