ಕಾಪು, ಜುಲೈ 6: ಬದ್ರಿಯ ಜುಮ್ಮಾ ಮಸ್ಜಿದ್, ಮಲ್ಲಾರು-ಮಜೂರು ಆಶ್ರಯದಲ್ಲಿ ಎಸ್ಐಆರ್ (SIR) ಮಾಹಿತಿ ಶಿಬಿರ ಹಾಗೂ ದೇಶದ ಕಾನೂನು-ಸಂವಿಧಾನದ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸ್ಜಿದ್ ಅಧ್ಯಕ್ಷ ಡಾ. ಫಾರೂಕ್ ಚಂದ್ರನಗರ ವಹಿಸಿ ಮಾತನಾಡಿ, ಎಸ್ಐಆರ್ ಕುರಿತು ಸಮಗ್ರ ಮಾಹಿತಿ ಪಡೆದು ಸರ್ಕಾರದ ನಿರ್ದೇಶನಗಳಿಗೆ ಅನುಗುಣವಾಗಿ ದೇಶದ ಕಾನೂನು ಹಾಗೂ ಸಂವಿಧಾನಕ್ಕೆ ಎಲ್ಲರೂ ಸಹಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಮಸ್ಜಿದ್ ಖತೀಬರಾದ ಅಬ್ದುಲ್ ರಶೀದ್ ಸಖಾಫಿ ಅಲ್-ಖಾಮಿಲ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಮಾಜಮುಖಿ ಹಾಗೂ ಜನಪರ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವುದರಿಂದ ಸಮಾಜದಲ್ಲಿ ಉತ್ತಮ ಬದಲಾವಣೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನ್ಯಾಯವಾದಿ ಅಬ್ದುಲ್ ರೆಹಮಾನ್ ಎಸ್ಐಆರ್ ಪ್ರಕ್ರಿಯೆ ಹಾಗೂ ದೇಶದ ಕಾನೂನು-ಸಂವಿಧಾನದ ಕುರಿತು ಮಾಹಿತಿ ನೀಡಿದರು. ಭಾರತದ ಸಂವಿಧಾನ, ಕಾನೂನು ಮತ್ತು ನಾಗರಿಕರ ಹಕ್ಕು-ಕರ್ತವ್ಯಗಳ ಬಗ್ಗೆ ಅರಿವು ಹೊಂದಿರುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ಎಸ್ಐಆರ್ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಭಾಗವಹಿಸುವ ಅಗತ್ಯವಿದ್ದು, ಮಸ್ಜಿದ್ ಆಡಳಿತ ಸಮಿತಿಯ ನೇತೃತ್ವದಲ್ಲಿ ಸಮಾಜದಲ್ಲಿ ಕಾನೂನು ಅರಿವು, ನಾಗರಿಕ ಜವಾಬ್ದಾರಿ ಹಾಗೂ ಸಾಮಾಜಿಕ ಪ್ರಜ್ಞೆ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ತಿಳಿಸಿದರು. ಯುವಜನರಲ್ಲಿ ಶಿಸ್ತು, ಸಂಯಮ, ಧಾರ್ಮಿಕ ಮೌಲ್ಯಗಳ ಜೊತೆಗೆ ದೇಶದ ಕಾನೂನು ಮತ್ತು ಸಂವಿಧಾನದ ಬಗ್ಗೆ ಅರಿವು ಮೂಡಿಸುವುದು ಪ್ರತಿಯೊಂದು ಮೊಹಲ್ಲಾ ಹಾಗೂ ಪೋಷಕರ ಕರ್ತವ್ಯವಾಗಿದೆ ಎಂದರು.
“ನಿಮ್ಮ ತಾಯಿನಾಡಿನ ಕಾನೂನನ್ನು ತಿಳಿದುಕೊಳ್ಳಿ” ಎಂಬ ಸಂದೇಶವನ್ನು ಪ್ರವಾದಿ ಹಜರತ್ ಮುಹಮ್ಮದ್ (ಸ.ಅ.) ಅವರ ಬೋಧನೆಗಳಲ್ಲಿಯೂ ಕಾಣಬಹುದು ಎಂದು ಅವರು ಉಲ್ಲೇಖಿಸಿದರು.
ಕಾರ್ಯಕ್ರಮದಲ್ಲಿ ಬಿ.ಜೆ.ಎಂ ಉಪಾಧ್ಯಕ್ಷ ಹಸನಬ್ಬ ಮಜೂರು, ಕಾರ್ಯದರ್ಶಿ ರಜಬ್ ಕರಂದಾಡಿ, ಕೋಶಾಧಿಕಾರಿ ಪಿ.ಎಂ. ಇಬ್ರಾಹಿಂ ಪಾದೂರು, ಸದಸ್ಯರಾದ ರಝಕ್ ಕೊಪ್ಪಲ್ತೋಟ, ಹಸನಬ್ಬ ಪಕೀರಣಕಟ್ಟೆ, ರಝಕ್ ಕೊಪ್ಪ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಹಾಗೂ ಮೊಹಲ್ಲಾದ ಅನೇಕ ಗಣ್ಯರು ಉಪಸ್ಥಿತರಿದ್ದರು.

