ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ಸಿಡಿಸಿಸಿ) ವತಿಯಿಂದ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಸೋಮವಾರ ಆಯುಧ ಪೂಜೆಯನ್ನು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ ಉಪಸ್ಥಿತಿಯಲ್ಲಿ ಬ್ಯಾಂಕಿನ ವಾಹನಗಳು, ಯಂತ್ರೋಪಕರಣಗಳು ಹಾಗೂ ಕಚೇರಿಯ ವಿವಿಧ ಉಪಕರಣಗಳಿಗೆ ಪೂಜೆ ಸಲ್ಲಿಸಲಾಯಿತು. ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ನಡೆದ ಪೂಜಾ ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧಿಕಾರಿಗಳು, ನಿರ್ದೇಶಕರು ಹಾಗೂ ಗಣ್ಯರು ಭಾಗವಹಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಬಾರ್ಡ್ನ ಮುಖ್ಯ ಪ್ರಧಾನ ವ್ಯವಸ್ಥಾಪಕಿ ಸಂಗೀತಾ ಕರ್ತ, ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಮೇಘರಾಜ್ ಜೈನ್, ಬ್ಯಾಂಕ್ ನಿರ್ದೇಶಕರಾದ ಶಶಿಕುಮಾರ್ ರೈ ಬಾಳ್ಕೊಟ್ಟು, ಜೈರಾಜ್ ಬಿ. ರೈ, ರಾಜೇಶ್ ರಾವ್ ಹಾಗೂ ಸದಾಶಿವ ಉಳ್ಳಾಲ್ ಉಪಸ್ಥಿತರಿದ್ದರು.
ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಗೋಪಾಲಕೃಷ್ಣ ಭಟ್, ಮಹಾಪ್ರಬಂಧಕ ಸುನಿಲ್ ಕುಮಾರ್ ಹೊಳ್ಳ ಹಾಗೂ ಉದ್ಯಮಿಗಳಾದ ಇನಾಯತ್ ಅಲಿ ಮತ್ತು ಜಯಪ್ರಕಾಶ್ ತುಂಬೆ ಸೇರಿದಂತೆ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

