ಮಂಗಳೂರು: ಅಖಿಲ ಭಾರತ ತುಳು ಒಕ್ಕೂಟ (ರಿ.), ಮಂಗಳೂರು ಇದರ ನಿಕಟಪೂರ್ವ ಅಧ್ಯಕ್ಷರು ಹಾಗೂ ಮುಂಬೈನ ಖ್ಯಾತ ಉದ್ಯಮಿ ಧರ್ಮಪಾಲ ಯು. ದೇವಾಡಿಗ ಅವರು ಮುಂಬೈನ ಭವಾನಿ ಫೌಂಡೇಶನ್ ಟ್ರಸ್ಟ್ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ವಿಶ್ವ ದೇವಾಡಿಗ ಮಹಾಮಂಡಲದ ಅಧ್ಯಕ್ಷರಾಗಿ ಹಾಗೂ ಮುಂಬೈ ದೇವಾಡಿಗ ಸಂಘದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಧರ್ಮಪಾಲ ಯು. ದೇವಾಡಿಗ ಅವರು ತುಳು ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ವಿವಿಧ ಸಂಘ-ಸಂಸ್ಥೆಗಳ ಮೂಲಕ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅವರು ಸಲ್ಲಿಸುತ್ತಿರುವ ಸೇವೆ ಗಮನಾರ್ಹವಾಗಿದೆ.
ಸಮಾಜದ ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಏಳಿಗೆಗೆ ವಿಶೇಷ ಕಾಳಜಿ ವಹಿಸುತ್ತಿರುವ ಅವರು, ಹಲವಾರು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡುತ್ತಿದ್ದಾರೆ. ಅಲ್ಲದೆ, ನಿರ್ಗತಿಕರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಆರ್ಥಿಕ ಸಹಾಯ ಒದಗಿಸುವ ಮೂಲಕ ಮಾನವೀಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಅವರ ಸಾಮಾಜಿಕ ಕಳಕಳಿ, ಸೇವಾ ಮನೋಭಾವ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯ ಕೊಡುಗೆಗಳನ್ನು ಗುರುತಿಸಿ, ಆರ್ಯಭಟ ಸಾಂಸ್ಕೃತಿಕ ಪ್ರಶಸ್ತಿ, ನವದೆಹಲಿಯಲ್ಲಿ ಇಂದಿರಾ ಗಾಂಧಿ ಸೇವಾರತ್ನ ಪ್ರಶಸ್ತಿ, ಅಬುಧಾಬಿಯಲ್ಲಿ ಕುವೆಂಪು ಗ್ಲೋಬಲ್ ಮ್ಯಾನ್ ಅಂತರರಾಷ್ಟ್ರೀಯ ಪ್ರಶಸ್ತಿ ಹಾಗೂ ನವದೆಹಲಿಯಲ್ಲಿ ರಾಷ್ಟ್ರೀಯ ಉದ್ಯೋಗ ಭಾರತಿ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿ-ಪುರಸ್ಕಾರಗಳು ಮತ್ತು ಗೌರವಗಳು ಲಭಿಸಿವೆ.
ವಿವಿಧ ಸಂಘ-ಸಂಸ್ಥೆಗಳ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಧರ್ಮಪಾಲ ಯು. ದೇವಾಡಿಗ ಅವರ ಆಯ್ಕೆಯು ಭವಾನಿ ಫೌಂಡೇಶನ್ ಟ್ರಸ್ಟ್ನ ಮುಂದಿನ ಸಾಮಾಜಿಕ ಹಾಗೂ ಸೇವಾ ಚಟುವಟಿಕೆಗಳಿಗೆ ಮತ್ತಷ್ಟು ಬಲ ತುಂಬುವ ನಿರೀಕ್ಷೆಯಿದೆ.
ವರದಿ: ಮುಲ್ಕಿ ಕರುಣಾಕರ ಶೆಟ್ಟಿ

