ಮಂಗಳೂರು: ತುಳುನಾಡಿನ ಸಾಂಪ್ರದಾಯಿಕ ಹುಲಿವೇಷ ಕುಣಿತದ ವೈಭವ, ಕಲಾತ್ಮಕತೆ ಹಾಗೂ ಕರಾವಳಿಯ ಸಾಂಸ್ಕೃತಿಕ ಪರಂಪರೆಯನ್ನು ಸಾರುವ ಪ್ರತಿಷ್ಠಿತ ಪಿಲಿನಲಿಕೆ-11 ಹುಲಿವೇಷ ಸ್ಪರ್ಧೆಯು ಅಕ್ಟೋಬರ್ 20ರಂದು ಮಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ನಗರದ ಮಂಗಳಾ ಕ್ರೀಡಾಂಗಣದ ಸಮೀಪವಿರುವ ಕರಾವಳಿ ಉತ್ಸವ ಮೈದಾನದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸ್ಪರ್ಧೆ ಆರಂಭವಾಗಲಿದೆ.
ಪಿಲಿನಲಿಕೆ ಪ್ರತಿಷ್ಠಾನ (ರಿ.) ಅಧ್ಯಕ್ಷ ಮಿಥುನ್ ರೈ ಅವರ ಸಾರಥ್ಯದಲ್ಲಿ, ನಮ್ಮ ಟಿವಿ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈಗಾಗಲೇ ಹತ್ತು ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿರುವ ಪಿಲಿನಲಿಕೆ ಸ್ಪರ್ಧೆಯ 11ನೇ ಆವೃತ್ತಿಯಲ್ಲಿ ತುಳುನಾಡಿನ ಒಂಬತ್ತು ಪ್ರತಿಷ್ಠಿತ ಹುಲಿವೇಷ ತಂಡಗಳು ಭಾಗವಹಿಸಲಿದ್ದು, ಪ್ರೇಕ್ಷಕರಿಗೆ ರೋಮಾಂಚಕ ಸ್ಪರ್ಧೆಯ ರಸದೌತಣ ನೀಡಲಿವೆ.
ವಿಜೇತ ತಂಡಕ್ಕೆ ₹10 ಲಕ್ಷ ನಗದು ಬಹುಮಾನ!
ಈ ಬಾರಿಯ ಪಿಲಿನಲಿಕೆ ಸ್ಪರ್ಧೆಯ ಪ್ರಮುಖ ಆಕರ್ಷಣೆಯೆಂದರೆ ಭರ್ಜರಿ ನಗದು ಬಹುಮಾನ. ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ₹10 ಲಕ್ಷ ನಗದು ಬಹುಮಾನ ಹಾಗೂ ಫಲಕ ನೀಡಲಾಗುವುದು. ದ್ವಿತೀಯ ಸ್ಥಾನಕ್ಕೆ ₹5 ಲಕ್ಷ ಮತ್ತು ತೃತೀಯ ಸ್ಥಾನಕ್ಕೆ ₹3 ಲಕ್ಷ ನಗದು ಬಹುಮಾನದ ಜೊತೆಗೆ ಫಲಕ ನೀಡಿ ಗೌರವಿಸಲಾಗುವುದು.
ತಂಡಗಳ ನಡುವಿನ ಸ್ಪರ್ಧೆಯ ಜತೆಗೆ ಹುಲಿವೇಷ ಕಲೆಯ ವಿವಿಧ ಆಯಾಮಗಳನ್ನು ಗುರುತಿಸುವ ಉದ್ದೇಶದಿಂದ ವೈಯಕ್ತಿಕ ವಿಭಾಗಗಳಲ್ಲಿಯೂ ವಿಶೇಷ ಬಹುಮಾನಗಳನ್ನು ಘೋಷಿಸಲಾಗಿದೆ.
ಅತ್ಯುತ್ತಮ ಮರಿಹುಲಿ, ಕರಿಹುಲಿ, ಮುಡಿ ಹಾರಿಸುವಿಕೆ, ತಾಸೆ, ಬಣ್ಣಗಾರಿಕೆ ಹಾಗೂ ಅತ್ಯುತ್ತಮ ಹುಲಿಕುಣಿತ ವಿಭಾಗಗಳಲ್ಲಿ ವಿಜೇತರಾಗುವವರಿಗೆ ತಲಾ ₹50 ಸಾವಿರ ನಗದು ಬಹುಮಾನ ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಂದು ತಂಡಕ್ಕೂ ₹50 ಸಾವಿರ ಪ್ರೋತ್ಸಾಹಧನ ನೀಡುವ ಮೂಲಕ ಹುಲಿವೇಷ ಕಲಾವಿದರನ್ನು ಉತ್ತೇಜಿಸಲಾಗುತ್ತಿದೆ.
ಖ್ಯಾತ ತಾರೆಯರ ಆಗಮನದ ನಿರೀಕ್ಷೆ
ಪಿಲಿನಲಿಕೆ-11 ಕಾರ್ಯಕ್ರಮಕ್ಕೆ ಕ್ರಿಕೆಟ್ ಕ್ಷೇತ್ರದ ಖ್ಯಾತ ಆಟಗಾರ ದಿನೇಶ್ ಕಾರ್ತಿಕ್, ಅಂತಾರಾಷ್ಟ್ರೀಯ ಖ್ಯಾತಿಯ ಕುಸ್ತಿಪಟು ಗ್ರೇಟ್ ಕಾಲಿ ಸೇರಿದಂತೆ ಬಾಲಿವುಡ್, ಸ್ಯಾಂಡಲ್ವುಡ್ ಹಾಗೂ ಕೋಸ್ಟಲ್ವುಡ್ನ ಜನಪ್ರಿಯ ತಾರೆಯರು ಆಗಮಿಸುವ ನಿರೀಕ್ಷೆಯಿದೆ. ಗಣ್ಯರ ಉಪಸ್ಥಿತಿ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಆಕರ್ಷಣೆಗಳು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲಿವೆ.
ತುಳುನಾಡಿನ ಸಾಂಸ್ಕೃತಿಕ ವೈಭವಕ್ಕೆ ವೇದಿಕೆ
ತುಳುನಾಡಿನ ಜನಜೀವನ, ಧಾರ್ಮಿಕ ನಂಬಿಕೆಗಳು ಹಾಗೂ ಸಾಂಸ್ಕೃತಿಕ ಪರಂಪರೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಹುಲಿವೇಷವು ಕರಾವಳಿಯ ವಿಶಿಷ್ಟ ಕಲಾಪ್ರಕಾರವಾಗಿದೆ. ಹುಲಿವೇಷದ ಬಣ್ಣಗಾರಿಕೆ, ವೇಷಭೂಷಣ, ತಾಸೆಯ ನಾದಕ್ಕೆ ತಕ್ಕ ಹೆಜ್ಜೆಗಳು ಹಾಗೂ ಕಲಾವಿದರ ದೈಹಿಕ ಕೌಶಲ್ಯ ಈ ಕಲೆಯ ಪ್ರಮುಖ ಆಕರ್ಷಣೆಗಳಾಗಿವೆ.
ಈ ಸಾಂಪ್ರದಾಯಿಕ ಕಲೆಯ ಮೂಲ ಸ್ವರೂಪವನ್ನು ಉಳಿಸಿ ಬೆಳೆಸುವುದು, ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸುವುದು, ಯುವಪೀಳಿಗೆಗೆ ಹುಲಿವೇಷದ ಮಹತ್ವವನ್ನು ಪರಿಚಯಿಸುವುದು ಹಾಗೂ ತುಳುನಾಡಿನ ಸಾಂಸ್ಕೃತಿಕ ವೈಭವವನ್ನು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ಪಿಲಿನಲಿಕೆ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ.
ಹತ್ತು ಯಶಸ್ವಿ ಆವೃತ್ತಿಗಳ ಬಳಿಕ ನಡೆಯುತ್ತಿರುವ 11ನೇ ಆವೃತ್ತಿಯ ಪಿಲಿನಲಿಕೆ ಸ್ಪರ್ಧೆಯು ಹುಲಿವೇಷ ತಂಡಗಳ ನಡುವಿನ ಪೈಪೋಟಿಯೊಂದಿಗೆ ತುಳುನಾಡಿನ ಸಾಂಸ್ಕೃತಿಕ ಶಕ್ತಿಯನ್ನು ಅನಾವರಣಗೊಳಿಸುವ ಮಹತ್ವದ ವೇದಿಕೆಯಾಗಲಿದೆ. ಕರಾವಳಿಯ ಜನತೆ, ಕಲಾಭಿಮಾನಿಗಳು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿರೀಕ್ಷೆಯಿದೆ.

