ಮಂಗಳೂರು: ನಗರದ ಹೊರವಲಯದ ಎಂಆರ್ಪಿಎಲ್ನಲ್ಲಿ ಸಂಭವಿಸಿದ ಸ್ಫೋಟ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜೇಶ್ ಡಿಸಿಲ್ವ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಾಜೇಶ್ ಡಿಸಿಲ್ವ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಅವರು, ವೈದ್ಯರ ಸತತ ಪ್ರಯತ್ನಗಳ ಹೊರತಾಗಿಯೂ ಬದುಕುಳಿಯದೆ ಕೊನೆಯುಸಿರೆಳೆದಿದ್ದಾರೆ. ಅವರ ನಿಧನದಿಂದ ಸ್ಫೋಟ ದುರಂತದ ನೋವು ಮತ್ತಷ್ಟು ಹೆಚ್ಚಾಗಿದ್ದು, ಕುಟುಂಬಸ್ಥರು, ಬಂಧುಮಿತ್ರರು ಹಾಗೂ ಆತ್ಮೀಯರಲ್ಲಿ ಶೋಕ ಮಡುಗಟ್ಟಿದೆ.
ಈ ದುರ್ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಆಲ್ ಇಂಡಿಯಾ ಕನ್ಸ್ಯೂಮರ್ ಪ್ರೊಟೆಕ್ಷನ್ ಆರ್ಗನೈಸೇಶನ್ನ ಕರ್ನಾಟಕ ರಾಜ್ಯಾಧ್ಯಕ್ಷರು ಹಾಗೂ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪು ಅವರು, ರಾಜೇಶ್ ಡಿಸಿಲ್ವ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ಈ ಅತೀವ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿರುವ ಅವರು, ಸ್ಫೋಟ ದುರಂತದಿಂದ ನೊಂದಿರುವ ಕುಟುಂಬಗಳಿಗೆ ಸೂಕ್ತ ನೆರವು ಮತ್ತು ಸಾಂತ್ವನ ಒದಗಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.

