ಬ್ರಹ್ಮಾವರ, ಜುಲೈ 10: ಆರೂರು ಗ್ರಾಮದ ಅಡ್ಜಿಲು ಭಾಗದಲ್ಲಿ ತೀವ್ರ ವಿದ್ಯುತ್ ಓವರ್ಲೋಡ್, ಪದೇ ಪದೇ ಉಂಟಾಗುತ್ತಿರುವ ವಿದ್ಯುತ್ ಕಡಿತ ಹಾಗೂ ಕಡಿಮೆ ವೋಲ್ಟೇಜ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಹೆಚ್ಚುವರಿ ಟ್ರಾನ್ಸ್ಫಾರ್ಮರ್ ಅಳವಡಿಕೆ ಮತ್ತು ಹಳೆಯ ವಿದ್ಯುತ್ ತಂತಿಗಳ ಬದಲಿಗೆ ಹೊಸ ಗುಣಮಟ್ಟದ ತಂತಿಗಳನ್ನು ಅಳವಡಿಸುವಂತೆ ಒತ್ತಾಯಿಸಿ ತುಳುನಾಡ ರಕ್ಷಣಾ ವೇದಿಕೆ (ರಿ.), ಬ್ರಹ್ಮಾವರ ತಾಲೂಕು ಘಟಕ ವತಿಯಿಂದ ಶುಕ್ರವಾರ (ಜುಲೈ 10) ಬೆಳಿಗ್ಗೆ 11 ಗಂಟೆಗೆ ಮೆಸ್ಕಾಂ ಬ್ರಹ್ಮಾವರ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ), ಕಾರ್ಯ ಮತ್ತು ಪಾಲನಾ ಉಪವಿಭಾಗ, ಮೆಸ್ಕಾಂ ಬ್ರಹ್ಮಾವರರಾದ ಶ್ರೀ ಸತೀಶ್ ಎಚ್. ಅವರಿಗೆ ಮನವಿ ಪತ್ರ ಸಲ್ಲಿಸಿ, ಗ್ರಾಮಸ್ಥರ ಬಹುಕಾಲದ ಸಮಸ್ಯೆಗೆ ತುರ್ತು ಪರಿಹಾರ ಕಲ್ಪಿಸುವಂತೆ ಮನವಿ ಮಾಡಲಾಯಿತು.
ಮನವಿಯಲ್ಲಿ ತಿಳಿಸಿರುವಂತೆ, ಆರೂರು ಗ್ರಾಮದ ಅಡ್ಜಿಲು ಭಾಗದಲ್ಲಿ ಸುಮಾರು 763 ಕುಟುಂಬಗಳು ವಾಸಿಸುತ್ತಿದ್ದು, ಒಟ್ಟು 3,609 ಜನಸಂಖ್ಯೆ ಇದೆ. ದಿನದಿಂದ ದಿನಕ್ಕೆ ಜನಸಂಖ್ಯೆ ಹಾಗೂ ವಿದ್ಯುತ್ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪ್ರಸ್ತುತ ಒಂದೇ ಟ್ರಾನ್ಸ್ಫಾರ್ಮರ್ ಮೂಲಕ ವಿದ್ಯುತ್ ಪೂರೈಕೆ ನಡೆಯುತ್ತಿರುವುದರಿಂದ ಟ್ರಾನ್ಸ್ಫಾರ್ಮರ್ ಮೇಲೆ ಅತಿಯಾದ ಹೊರೆ ಉಂಟಾಗಿ ಪದೇ ಪದೇ ವಿದ್ಯುತ್ ಕಡಿತವಾಗುತ್ತಿದೆ.
ಈ ನಿರಂತರ ವಿದ್ಯುತ್ ವ್ಯತ್ಯಯದಿಂದ ಮನೆಗಳಲ್ಲಿ ಬಳಸುವ ವಿದ್ಯುತ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳು ವೋಲ್ಟೇಜ್ ಏರಿಳಿತದಿಂದ ಹಾನಿಗೊಳಗಾಗುತ್ತಿವೆ. ಕುಡಿಯುವ ನೀರಿನ ಸರಬರಾಜು, ವಿದ್ಯಾರ್ಥಿಗಳ ವಿದ್ಯಾಭ್ಯಾಸ, ಸಣ್ಣ ವ್ಯಾಪಾರಿಗಳು ಹಾಗೂ ಸಾರ್ವಜನಿಕರ ದೈನಂದಿನ ಜೀವನಕ್ಕೂ ಗಂಭೀರ ತೊಂದರೆ ಉಂಟಾಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಇದಲ್ಲದೆ, ಹಲವು ವರ್ಷಗಳ ಹಿಂದೆ ಅಳವಡಿಸಲಾದ ವಿದ್ಯುತ್ ತಂತಿಗಳು ಹಳೆಯದಾಗಿ ಶಿಥಿಲಗೊಂಡಿರುವುದರಿಂದ ಅವುಗಳನ್ನು ತೆರವುಗೊಳಿಸಿ ಹೊಸ ಗುಣಮಟ್ಟದ ವಿದ್ಯುತ್ ತಂತಿಗಳನ್ನು ಅಳವಡಿಸುವ ಅಗತ್ಯವಿದೆ ಎಂದು ವೇದಿಕೆ ತಿಳಿಸಿದೆ.
ಆದ್ದರಿಂದ ಆರೂರು–ಅಡ್ಜಿಲು ಭಾಗಕ್ಕೆ ತುರ್ತಾಗಿ ಹೆಚ್ಚುವರಿ ಟ್ರಾನ್ಸ್ಫಾರ್ಮರ್ ಮಂಜೂರು ಮಾಡಿ ಅಳವಡಿಸುವುದು, ಹಳೆಯ ವಿದ್ಯುತ್ ತಂತಿಗಳನ್ನು ತೆರವುಗೊಳಿಸಿ ಹೊಸ ವಿದ್ಯುತ್ ತಂತಿಗಳನ್ನು ಅಳವಡಿಸುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಶೀಘ್ರದಲ್ಲಿ ಕೈಗೊಳ್ಳುವಂತೆ ತುಳುನಾಡ ರಕ್ಷಣಾ ವೇದಿಕೆ ಒತ್ತಾಯಿಸಿದೆ. ಇದರಿಂದ ಗ್ರಾಮಸ್ಥರು ದೀರ್ಘಕಾಲದಿಂದ ಎದುರಿಸುತ್ತಿರುವ ವಿದ್ಯುತ್ ಕಡಿತ ಹಾಗೂ ಕಡಿಮೆ ವೋಲ್ಟೇಜ್ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ವೇದಿಕೆ ವಿಶ್ವಾಸ ವ್ಯಕ್ತಪಡಿಸಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲಾ ಅಧ್ಯಕ್ಷ ಫ್ರಾಂಕಿ ಡಿಸೋಜಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಜಯ ಪೂಜಾರಿ, ಜಿಲ್ಲಾ ಮುಖಂಡ ಮನೋಜ್ ಮಾಯಾಡಿ, ಜಿಲ್ಲಾ ಜೊತೆ ಕಾರ್ಯದರ್ಶಿ ಕೃಷ್ಣ ಪೂಜಾರಿ ಮಾರ್ಪಳ್ಳಿ, ಬೈರಂಪಳ್ಳಿ ತಾಲೂಕು ಘಟಕದ ಅಧ್ಯಕ್ಷ ಕೃಷ್ಣಾನಂದ ನಾಯಕ್, ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ಶರತ್ ರಾಜ್ ಆರೂರು, ಉಪಾಧ್ಯಕ್ಷ ನಿತಿನ್ ಶೆಟ್ಟಿ ಪೇತ್ರಿ, ಸಂಘಟನಾ ಕಾರ್ಯದರ್ಶಿ ವಿಜಯ ನಾಯಕ್, ಸದಸ್ಯರಾದ ಗೋಪಾಲ್ ನಾಯಕ್, ರವಿ ಆರೂರು, ರಮೇಶ್ ಹಾಗೂ ಮಿಥುನ್ ನಾಯಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

