ಉಡುಪಿ, ಜು. 9: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆದರ್ಶ ಆಸ್ಪತ್ರೆಯ ರಕ್ತಸಂಗ್ರಹ ಘಟಕ ಹಾಗೂ ಉಡುಪಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಕುರಿತು ಹರಿದಾಡುತ್ತಿರುವ ಆರೋಪಗಳು ಮತ್ತು ವದಂತಿಗಳು ಸಂಪೂರ್ಣ ಆಧಾರರಹಿತವಾಗಿದ್ದು, ಆಸ್ಪತ್ರೆಗಳ ಕಾರ್ಯವೈಖರಿ ಕಾನೂನುಬದ್ಧ ಹಾಗೂ ಸರ್ಕಾರದ ನಿಯಮಾವಳಿಗಳ ಅನುಸಾರವೇ ನಡೆಯುತ್ತಿದೆ ಎಂದು ಆದರ್ಶ ಆಸ್ಪತ್ರೆಯ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಆದರ್ಶ ಆಸ್ಪತ್ರೆಯಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆ, ಕ್ಯಾನ್ಸರ್ ಚಿಕಿತ್ಸೆಗಳು, ನರರೋಗ ಶಸ್ತ್ರಚಿಕಿತ್ಸೆಗಳು, ತುರ್ತು ಅಪಘಾತ ಚಿಕಿತ್ಸೆಗಳು ಸೇರಿದಂತೆ ಅನೇಕ ವಿಶೇಷ ಚಿಕಿತ್ಸಾ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ಇಂತಹ ಸಂಕೀರ್ಣ ಚಿಕಿತ್ಸೆಗಳಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಸುರಕ್ಷಿತ ರಕ್ತದ ಅಗತ್ಯವಿರುವುದರಿಂದ ಆಸ್ಪತ್ರೆಯಲ್ಲಿ ಅಧಿಕೃತ ಅನುಮತಿ ಪಡೆದ ರಕ್ತಸಂಗ್ರಹ ಘಟಕ (Blood Storage Centre) ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದೆ.
ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ರಕ್ತನಿಧಿ (Blood Bank) ಅಲ್ಲ, ಬದಲಾಗಿ ಸಂಬಂಧಿತ ಅಧಿಕಾರಿಗಳ ಅನುಮತಿ ಹಾಗೂ ಪರವಾನಗಿಯೊಂದಿಗೆ ಕಾರ್ಯನಿರ್ವಹಿಸುವ ರಕ್ತಸಂಗ್ರಹ ಘಟಕವಾಗಿದೆ. ಈ ಘಟಕವು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಯಮಗಳು, ಆರೋಗ್ಯ ಇಲಾಖೆಯ ಮಾರ್ಗಸೂಚಿಗಳು ಹಾಗೂ ಅನ್ವಯವಾಗುವ ಎಲ್ಲಾ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಸೇವೆ ನೀಡುತ್ತಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಆದರ್ಶ ಆಸ್ಪತ್ರೆಯ ರಕ್ತಸಂಗ್ರಹ ಘಟಕವು ಸರ್ಕಾರದ ಮಾನ್ಯತೆ ಪಡೆದ ಉಡುಪಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದೊಂದಿಗೆ ಸಂಯೋಜಿತವಾಗಿ ಕಾರ್ಯನಿರ್ವಹಿಸುತ್ತಿದೆ. ಚಿಕಿತ್ಸೆಗೆ ಅಗತ್ಯವಿರುವ ರಕ್ತ ಹಾಗೂ ರಕ್ತ ಘಟಕಗಳನ್ನು ಜಿಲ್ಲಾ ಆಸ್ಪತ್ರೆಯ ರಕ್ತನಿಧಿಯಿಂದ ನಿಯಮಾನುಸಾರ ಪಡೆದು, ಅಗತ್ಯ ದಾಖಲೆಗಳ ಪರಿಶೀಲನೆ, ಗುಣಮಟ್ಟದ ದೃಢೀಕರಣ, ಸುರಕ್ಷತಾ ಕ್ರಮಗಳು ಹಾಗೂ ದಾಖಲಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕವೇ ವೈದ್ಯರ ಸಲಹೆ ಮತ್ತು ಚಿಕಿತ್ಸಾ ಅವಶ್ಯಕತೆಗೆ ಅನುಗುಣವಾಗಿ ರೋಗಿಗಳಿಗೆ ಒದಗಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
ರಕ್ತದ ಪ್ರತಿಯೊಂದು ಯುನಿಟ್ನ ಸ್ವೀಕಾರ, ಸಂಗ್ರಹಣೆ, ತಾಪಮಾನ ನಿಯಂತ್ರಣ, ಗುಣಮಟ್ಟದ ನಿರ್ವಹಣೆ ಹಾಗೂ ವಿತರಣೆಯ ಪ್ರತಿಯೊಂದು ಹಂತವೂ ನಿಗದಿತ ಮಾನದಂಡಗಳು ಮತ್ತು ಕಾರ್ಯವಿಧಾನಗಳ ಪ್ರಕಾರವೇ ನಡೆಯುತ್ತಿದ್ದು, ರೋಗಿಗಳ ಸುರಕ್ಷತೆಗೆ ಅತ್ಯುನ್ನತ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದೆ.
ಇದೇ ವೇಳೆ, ಉಡುಪಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿರುವ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದಿಂದ ಯಾವುದೇ ದಾಖಲೆಗಳಿಲ್ಲದೆ ರಕ್ತ ವಿತರಿಸಲಾಗುತ್ತಿದೆ ಅಥವಾ ಒಂದೇ ಬಾರಿ 15 ಯುನಿಟ್ ರಕ್ತವನ್ನು ಖಾಸಗಿ ಆಸ್ಪತ್ರೆಗೆ ಅಕ್ರಮವಾಗಿ ನೀಡಲಾಗಿದೆ ಎಂಬ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಆಧಾರರಹಿತವಾಗಿವೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದಿಂದ ರಕ್ತ ಹಾಗೂ ರಕ್ತ ಘಟಕಗಳ ವಿತರಣೆಯು ಕರ್ನಾಟಕ ಸರ್ಕಾರದ ಮಾರ್ಗಸೂಚಿಗಳು, Drugs and Cosmetics Act–1940, ಸಂಬಂಧಿತ ನಿಯಮಗಳು ಹಾಗೂ ರಕ್ತನಿಧಿಯ Standard Operating Procedures (SOP) ಅನುಸಾರ ಕಟ್ಟುನಿಟ್ಟಾಗಿ ನಡೆಯುತ್ತಿದೆ. ಪ್ರತಿಯೊಂದು ಯುನಿಟ್ ರಕ್ತವನ್ನು ಅಗತ್ಯ ದಾಖಲೆಗಳ ಪರಿಶೀಲನೆ, ವೈದ್ಯಕೀಯ ಅವಶ್ಯಕತೆ ಮತ್ತು ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ವಿತರಿಸಲಾಗುತ್ತದೆ. ಯಾವುದೇ ದಾಖಲೆಗಳಿಲ್ಲದೆ ರಕ್ತ ವಿತರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಜಿಲ್ಲಾ ಸರ್ಜನ್ ಸ್ಪಷ್ಟಪಡಿಸಿದ್ದಾರೆ.
ಆದರ್ಶ ಆಸ್ಪತ್ರೆಯ ಆಡಳಿತ ಮಂಡಳಿಯು ಆಸ್ಪತ್ರೆಯಲ್ಲಿ ನಡೆಯುವ ಎಲ್ಲಾ ರಕ್ತಸಂಗ್ರಹ ಮತ್ತು ವಿತರಣಾ ಪ್ರಕ್ರಿಯೆಗಳು ಸಂಬಂಧಿತ ಅಧಿಕಾರಿಗಳ ಮೇಲ್ವಿಚಾರಣೆ ಮತ್ತು ಪರಿಶೀಲನೆಗೆ ಒಳಪಟ್ಟಿದ್ದು, ಸಂಪೂರ್ಣ ಪಾರದರ್ಶಕ ಹಾಗೂ ಕಾನೂನುಬದ್ಧವಾಗಿವೆ ಎಂದು ಪುನರುಚ್ಚರಿಸಿದೆ. ಆಸ್ಪತ್ರೆಯು ಯಾವುದೇ ರೀತಿಯ ಅಕ್ರಮ ರಕ್ತ ವ್ಯಾಪಾರ ಅಥವಾ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಮಾಹಿತಿ ಮತ್ತು ಆಧಾರರಹಿತ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡದೆ, ಸಂಬಂಧಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಇಲಾಖೆಯಿಂದ ಅಧಿಕೃತವಾಗಿ ಪ್ರಕಟವಾಗುವ ಮಾಹಿತಿಯನ್ನಷ್ಟೇ ನಂಬುವಂತೆ ಮನವಿ ಮಾಡಲಾಗಿದೆ. ರೋಗಿಗಳ ಜೀವ ರಕ್ಷಣೆ, ಸುರಕ್ಷಿತ ರಕ್ತ ಲಭ್ಯತೆ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಬದ್ಧತೆಯನ್ನು ಮುಂದೆಯೂ ಅಚಲವಾಗಿ ಮುಂದುವರಿಸಲಾಗುವುದು ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.







