ಮಂಗಳೂರು, ಜೂನ್ 22: ಕೇವಲ ಎರಡು ನಿಮಿಷ ತಡವಾಗಿ ಬಂದ ಕಾರಣಕ್ಕೆ ವಿದ್ಯಾರ್ಥಿನಿಯರನ್ನು NEET ಮರುಪರೀಕ್ಷೆಯಿಂದ ವಂಚಿಸಿರುವ ಘಟನೆ ಶಿಕ್ಷಣ ವ್ಯವಸ್ಥೆಯ ಕ್ರೌರ್ಯ ಮತ್ತು ಅಮಾನವೀಯ ಮುಖವನ್ನು ಬಯಲಿಗೆಳೆದಿದೆ ಎಂದು ಅಂತರಾಷ್ಟೀಯ ತುಳುನಾಡ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ರಾವ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರದೇಶದ ವಿದಿಶಾದಲ್ಲಿ ನಡೆದ NEET ಮರುಪರೀಕ್ಷೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಕೇವಲ ಎರಡು ನಿಮಿಷ ತಡವಾಗಿ ಬಂದ ಕಾರಣ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದೆ. ಮತ್ತೊಬ್ಬ ವಿದ್ಯಾರ್ಥಿನಿ ಹಳೆಯ ಅಡ್ಮಿಟ್ ಕಾರ್ಡ್ ತಂದಿದ್ದ ಕಾರಣ ಪರೀಕ್ಷೆಯಿಂದ ವಂಚಿತಳಾಗಿದ್ದಾಳೆ. ಇದೇ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ತಪ್ಪು ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದ ವಿದ್ಯಾರ್ಥಿಯನ್ನು ಪೊಲೀಸರು ತಮ್ಮ ವಾಹನದಲ್ಲೇ ಸರಿಯಾದ ಪರೀಕ್ಷಾ ಕೇಂದ್ರಕ್ಕೆ ತಲುಪಿಸಿ ಮಾನವೀಯತೆಯ ಉದಾಹರಣೆ ಮೆರೆದಿದ್ದಾರೆ.
ಒಂದೆಡೆ ವಿದ್ಯಾರ್ಥಿಯ ಭವಿಷ್ಯ ಉಳಿಸಲು ಆಡಳಿತ ವ್ಯವಸ್ಥೆ ಕೈಜೋಡಿಸುತ್ತಿದ್ದರೆ, ಮತ್ತೊಂದೆಡೆ ಕೇವಲ ಎರಡು ನಿಮಿಷಗಳ ವಿಳಂಬದ ನೆಪದಲ್ಲಿ ವಿದ್ಯಾರ್ಥಿಗಳ ಕನಸುಗಳನ್ನು ನಾಶಪಡಿಸುವ ಧೋರಣೆ ಖಂಡನೀಯವಾಗಿದೆ. ಇದು ಪರೀಕ್ಷಾ ವ್ಯವಸ್ಥೆಯಲ್ಲ, ಶಿಕ್ಷಾ ವ್ಯವಸ್ಥೆಯಾಗಿದೆ ಎಂಬ ಭಾವನೆ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಮೂಡಿದೆ.
NEET ಪರೀಕ್ಷೆ ಎನ್ನುವುದು ಕೇವಲ ಒಂದು ಪ್ರವೇಶ ಪರೀಕ್ಷೆಯಲ್ಲ. ಅದು ಲಕ್ಷಾಂತರ ವಿದ್ಯಾರ್ಥಿಗಳ ವರ್ಷಗಳ ಪರಿಶ್ರಮ, ಪೋಷಕರ ತ್ಯಾಗ ಮತ್ತು ಕುಟುಂಬಗಳ ಕನಸುಗಳ ಪ್ರತೀಕವಾಗಿದೆ. ಅಂತಹ ಸಂದರ್ಭದಲ್ಲಿ ಟ್ರಾಫಿಕ್ ಜಾಮ್, ತಾಂತ್ರಿಕ ದೋಷ, ಆಡಳಿತಾತ್ಮಕ ವೈಫಲ್ಯ ಅಥವಾ ಅನಿವಾರ್ಯ ಸಂದರ್ಭಗಳಿಂದ ಕೆಲ ನಿಮಿಷ ತಡವಾದ ಕಾರಣಕ್ಕೆ ವಿದ್ಯಾರ್ಥಿಯ ಒಂದು ವರ್ಷದ ಭವಿಷ್ಯವನ್ನು ಕಸಿದುಕೊಳ್ಳುವುದು ಯಾವುದೇ ರೀತಿಯ ನ್ಯಾಯವಲ್ಲ.
ಇಂದು ದೇಶದಲ್ಲಿ ಕೋಟ್ಯಂತರ ರೂಪಾಯಿ ಹಗರಣ ನಡೆಸಿದವರಿಗೆ ಮರುಅವಕಾಶಗಳು ದೊರೆಯುತ್ತವೆ. ಕಾನೂನು ಉಲ್ಲಂಘಿಸಿದವರಿಗೆ ಮೇಲ್ಮನವಿ ಅವಕಾಶಗಳಿರುತ್ತವೆ. ಆದರೆ ಕೇವಲ ಎರಡು ನಿಮಿಷ ತಡವಾದ ವಿದ್ಯಾರ್ಥಿಗೆ ಮಾತ್ರ ಯಾವುದೇ ಅವಕಾಶ ನೀಡದಿರುವುದು ಶಿಕ್ಷಣ ವ್ಯವಸ್ಥೆಯ ದ್ವಂದ್ವ ನೀತಿಯನ್ನು ತೋರಿಸುತ್ತದೆ.
ವಿದ್ಯಾರ್ಥಿಗಳ ಭವಿಷ್ಯಕ್ಕಿಂತ ಯಾವುದೇ ನಿಯಮ ದೊಡ್ಡದಾಗಬಾರದು. ಶಿಸ್ತು ಮತ್ತು ನಿಯಮಗಳ ಹೆಸರಿನಲ್ಲಿ ಮಾನವೀಯತೆಯನ್ನು ಬಲಿಕೊಡುವುದನ್ನು ತುಳುನಾಡ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮತ್ತು ಕೇಂದ್ರ ಶಿಕ್ಷಣ ಸಚಿವಾಲಯವು ಇಂತಹ ಪ್ರಕರಣಗಳನ್ನು ಮರುಪರಿಶೀಲಿಸಿ, ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು.
ಭವಿಷ್ಯ ನಿರ್ಮಿಸುವ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳನ್ನು ಶಿಕ್ಷಿಸುವ ಸಾಧನವಾಗಬಾರದು. ಶಿಕ್ಷಣದಲ್ಲಿ ನಿಯಮಗಳ ಜೊತೆಗೆ ನ್ಯಾಯ, ಸಮಾನತೆ ಮತ್ತು ಮಾನವೀಯತೆಗೂ ಸಮಾನ ಸ್ಥಾನಮಾನ ದೊರೆಯಬೇಕು ಎಂದು ತುಳುನಾಡ ರಕ್ಷಣಾ ವೇದಿಕೆ ಆಗ್ರಹಿಸುತ್ತದೆ.

