ಮಂಗಳೂರು, ಜೂನ್ 20: ಗ್ರಾಮೀಣ ಹಾಗೂ ನಗರ ಪ್ರದೇಶದ ಪ್ರತಿಭಾವಂತ ಯುವಕರಿಗೆ ಗುಣಮಟ್ಟದ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಆಯೋಜಿಸಲಾಗುವ ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳ–2026ರ 16ನೇ ಆವೃತ್ತಿಯು ಆಗಸ್ಟ್ 7 ಮತ್ತು 8ರಂದು ಮೂಡುಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ನಡೆಯಲಿದೆ ಎಂದು ಡಾ. ಎಂ. ಮೋಹನ್ ಆಳ್ವ ತಿಳಿಸಿದ್ದಾರೆ.
ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2007ರಲ್ಲಿ ಆರಂಭವಾದ ಆಳ್ವಾಸ್ ಪ್ರಗತಿ ಇಂದು ಕರ್ನಾಟಕ ಸೇರಿದಂತೆ ನೆರೆಯ ರಾಜ್ಯಗಳ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ವಿಶ್ವಾಸಾರ್ಹ ಉದ್ಯೋಗ ವೇದಿಕೆಯಾಗಿ ಬೆಳೆದಿದೆ ಎಂದು ಹೇಳಿದರು.
ಸಾಮಾಜಿಕ ಹೊಣೆಗಾರಿಕೆ (CSR) ಕಾರ್ಯಕ್ರಮದ ಅಂಗವಾಗಿ ಸಂಪೂರ್ಣ ಉಚಿತವಾಗಿ ಆಯೋಜಿಸಲಾಗುವ ಈ ಮೇಳದಲ್ಲಿ ಅಭ್ಯರ್ಥಿಗಳು ಮತ್ತು ಕಂಪನಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಇದುವರೆಗೆ ನಡೆದ 22 ಉದ್ಯೋಗ ಮೇಳಗಳಲ್ಲಿ 66 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಶಾರ್ಟ್ಲಿಸ್ಟ್ ಆಗಿದ್ದು, 40 ಸಾವಿರಕ್ಕೂ ಅಧಿಕ ಮಂದಿಗೆ ಸ್ಥಳದಲ್ಲೇ ಉದ್ಯೋಗ ಆಫರ್ ದೊರೆತಿದೆ ಎಂದು ಮಾಹಿತಿ ನೀಡಿದರು.
ಈ ಬಾರಿಯ ಮೇಳದಲ್ಲಿ 300ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಬ್ಯಾಂಕಿಂಗ್, ಮಾಹಿತಿ ತಂತ್ರಜ್ಞಾನ, ಉತ್ಪಾದನೆ, ಔಷಧೋದ್ಯಮ, ಆರೋಗ್ಯ ಸೇವೆ, ಆತಿಥ್ಯ, ಮಾಧ್ಯಮ, ಶಿಕ್ಷಣ ಹಾಗೂ ನಿರ್ಮಾಣ ಕ್ಷೇತ್ರಗಳಲ್ಲಿ ಭರ್ತಿ ಪ್ರಕ್ರಿಯೆ ನಡೆಯಲಿದೆ. ವೈದ್ಯಕೀಯ, ಎಂಜಿನಿಯರಿಂಗ್, ಕಲಾ, ವಾಣಿಜ್ಯ, ವಿಜ್ಞಾನ, ನರ್ಸಿಂಗ್, ಡಿಪ್ಲೊಮಾ, ಐಟಿಐ, ಪಿಯುಸಿ ಹಾಗೂ ಎಸ್ಎಸ್ಎಲ್ಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶ ಲಭ್ಯವಾಗಲಿದೆ.
ಉದ್ಯೋಗ ಮೇಳದ ಪೂರ್ವಭಾವಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ವಿಶೇಷ ಮಾರ್ಗದರ್ಶನ ಮತ್ತು ಓರಿಯಂಟೇಷನ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಆಗಮಿಸುವ ಅಭ್ಯರ್ಥಿಗಳಿಗೆ ಆಗಸ್ಟ್ 6ರಿಂದ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಐಟಿಐ ವಿದ್ಯಾರ್ಥಿಗಳಿಗಾಗಿ ವಿಶೇಷ ಬಸ್ ಸೌಲಭ್ಯವೂ ಇರಲಿದೆ.
ಉದ್ಯೋಗಾಕಾಂಕ್ಷಿಗಳು ಕಡ್ಡಾಯವಾಗಿ ಆನ್ಲೈನ್ ಮೂಲಕ ನೋಂದಣಿ ಮಾಡಿಕೊಂಡು ಆಗಸ್ಟ್ 7ರಂದು ಬೆಳಿಗ್ಗೆ 8 ಗಂಟೆಗೆ ವಿದ್ಯಾಗಿರಿ ಕ್ಯಾಂಪಸ್ನಲ್ಲಿ ಹಾಜರಾಗಬೇಕು. ಅಭ್ಯರ್ಥಿಗಳು 5ರಿಂದ 10 ಪಾಸ್ಪೋರ್ಟ್ ಗಾತ್ರದ ಭಾವಚಿತ್ರಗಳು, ನವೀಕರಿಸಿದ ರೆಸ್ಯೂಮ್, ಅಂಕಪಟ್ಟಿಗಳ ದೃಢೀಕೃತ ಪ್ರತಿಗಳು ಹಾಗೂ ನೋಂದಣಿ ಸಂಖ್ಯೆಯನ್ನು ತರಬೇಕು ಎಂದು ಆಯೋಜಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9741440490, 9611750531 ಮತ್ತು 7975223865 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು.

