ಮಂಗಳೂರು, ಜೂನ್ 22: ಮಂಗಳೂರು ಮಹಾನಗರ ಪಾಲಿಕೆ ನಗರ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುತ್ತಿರುವ ಕ್ರಮವು ಬಡ ಹಾಗೂ ದುಡಿಯುವ ವರ್ಗದ ಜನರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಈ ಕಾರ್ಯಾಚರಣೆಯು ಸಾಮಾಜಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ ಎಂದು ತುಳುನಾಡ ರಕ್ಷಣಾ ವೇದಿಕೆ ಕಾರ್ಮಿಕ ಘಟಕದ ರಾಜ್ಯ ಸಂಚಾಲಕ ಪ್ರಶಾಂತ್ ಭಟ್ ಕಡಬ ಅವರು ಆರೋಪಿಸಿದ್ದಾರೆ.
ನಗರದ ವಿವಿಧ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ಸಣ್ಣ ವ್ಯಾಪಾರ ನಡೆಸಿಕೊಂಡು ಜೀವನ ಸಾಗಿಸುತ್ತಿರುವ ಬೀದಿ ಬದಿ ವ್ಯಾಪಾರಿಗಳನ್ನು ಯಾವುದೇ ಪರ್ಯಾಯ ವ್ಯವಸ್ಥೆ ಅಥವಾ ಪುನರ್ವಸತಿ ಯೋಜನೆ ರೂಪಿಸದೆ ತೆರವುಗೊಳಿಸಲಾಗುತ್ತಿದೆ. ಇದರಿಂದ ನೂರಾರು ಕುಟುಂಬಗಳು ತಮ್ಮ ಜೀವನೋಪಾಯದ ಮೂಲವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ಅಂಗವಿಕಲರು, ಮಹಿಳೆಯರು, ವಿಧವೆಯರು, ಹಿರಿಯ ನಾಗರಿಕರು ಹಾಗೂ ನಿರುದ್ಯೋಗಿ ಯುವಕರು ಈ ಕ್ರಮದಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಒಂದು ಕಡೆ ಬದುಕಿಗಾಗಿ ದುಡಿಯುತ್ತಿರುವ ಬಡ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ ಮಹಾನಗರ ಪಾಲಿಕೆ, ಮತ್ತೊಂದು ಕಡೆ ನಗರದಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುವ ಅನಧಿಕೃತ ಕಟ್ಟಡಗಳು, ಫುಟ್ಪಾತ್ ಅತಿಕ್ರಮಣಗಳು, ನಿಯಮಬಾಹಿರ ಕಟ್ಟಡ ಕಾಮಗಾರಿಗಳು ಹಾಗೂ ಸಾರ್ವಜನಿಕ ಸ್ಥಳಗಳ ಅಕ್ರಮ ಬಳಕೆಗಳ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಪ್ರಶಾಂತ್ ಭಟ್ ಕಡಬ ಹೇಳಿದ್ದಾರೆ.
“ಕಾನೂನು ಎಲ್ಲರಿಗೂ ಒಂದೇ ಆಗಿದ್ದರೆ ಅದರ ಅನುಷ್ಠಾನದಲ್ಲೂ ಸಮಾನತೆ ಇರಬೇಕು. ಬಡ ವ್ಯಾಪಾರಿಗಳ ಮೇಲೆ ಮಾತ್ರ ಕಾರ್ಯಾಚರಣೆ ನಡೆಸಿ, ಪ್ರಭಾವಿ ವ್ಯಕ್ತಿಗಳು ಮತ್ತು ಶ್ರೀಮಂತರಿಂದ ನಡೆಯುವ ನಿಯಮ ಉಲ್ಲಂಘನೆಗಳನ್ನು ಕಡೆಗಣಿಸುವುದು ಯಾವ ನ್ಯಾಯ?” ಎಂದು ಅವರು ಪ್ರಶ್ನಿಸಿದ್ದಾರೆ.
ಬೀದಿ ಬದಿ ವ್ಯಾಪಾರಿಗಳು ನಗರದ ಆರ್ಥಿಕ ಚಟುವಟಿಕೆಯ ಅವಿಭಾಜ್ಯ ಅಂಗವಾಗಿದ್ದು, ಸಾವಿರಾರು ಕುಟುಂಬಗಳ ಜೀವನ ನಿರ್ವಹಣೆಗೆ ಆಧಾರವಾಗಿದ್ದಾರೆ. ಇಂತಹ ಜನರನ್ನು ಏಕಾಏಕಿ ತೆರವುಗೊಳಿಸುವ ಬದಲು ಅವರಿಗೆ ಗುರುತಿನ ಚೀಟಿ ವಿತರಣೆ, ನಿಗದಿತ ವ್ಯಾಪಾರ ವಲಯಗಳ ನಿರ್ಮಾಣ, ಕುಡಿಯುವ ನೀರು, ವಿದ್ಯುತ್, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿ ಕಾನೂನುಬದ್ಧವಾಗಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನಗರದ ಅಭಿವೃದ್ಧಿ, ಸಂಚಾರ ವ್ಯವಸ್ಥೆ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವುದು ಮಹಾನಗರ ಪಾಲಿಕೆಯ ಜವಾಬ್ದಾರಿಯಾಗಿದೆ. ಆದರೆ ಅದೇ ಸಂದರ್ಭದಲ್ಲಿ ಬಡವರ ಜೀವನೋಪಾಯವನ್ನು ರಕ್ಷಿಸುವುದು ಮತ್ತು ಸಾಮಾಜಿಕ ಸಮಾನತೆಯನ್ನು ಕಾಪಾಡುವುದು ಕೂಡ ಆಡಳಿತದ ಕರ್ತವ್ಯವಾಗಿದೆ. ಆದ್ದರಿಂದ ನಗರದಲ್ಲಿನ ಎಲ್ಲ ರೀತಿಯ ಅತಿಕ್ರಮಣಗಳು, ಅನಧಿಕೃತ ಕಟ್ಟಡಗಳು ಹಾಗೂ ಕಟ್ಟಡ ನಿಯಮ ಉಲ್ಲಂಘನೆಗಳ ವಿರುದ್ಧ ಯಾವುದೇ ಭೇದಭಾವವಿಲ್ಲದೆ ಸಮಾನವಾಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಸಂವಿಧಾನಾತ್ಮಕ ತತ್ವವನ್ನು ಪಾಲಿಕೆ ಕಟ್ಟುನಿಟ್ಟಾಗಿ ಅನುಸರಿಸಿದಾಗ ಮಾತ್ರ ಸಾರ್ವಜನಿಕರಲ್ಲಿ ಆಡಳಿತದ ಮೇಲಿನ ವಿಶ್ವಾಸ ಮತ್ತಷ್ಟು ಬಲವಾಗಲಿದೆ. ಬಡವರ ಬದುಕಿಗೆ ಧಕ್ಕೆಯಾಗದಂತೆ ಮಾನವೀಯ ದೃಷ್ಟಿಕೋನದಿಂದ ಸಮಸ್ಯೆಯನ್ನು ಪರಿಹರಿಸುವಂತೆ ಮಂಗಳೂರು ಮಹಾನಗರ ಪಾಲಿಕೆಗೆ ತುಳುನಾಡ ರಕ್ಷಣಾ ವೇದಿಕೆ ಕಾರ್ಮಿಕ ಘಟಕ ರಾಜ್ಯ ಸಂಚಾಲಕ ಪ್ರಶಾಂತ್ ಭಟ್ ಕಡಬ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

