ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ಹಿರಿಯ ನಾಗಸ್ವರ ವಾದಕ ಸೈಯದ್ ನಾಸಿರ್ ಎರ್ಮಾಳ್ ಅವರಿಗೆ ಚಾವಡಿ ತಮ್ಮನದ ಗೌರವ ಸಮರ್ಪಣೆಯ ಕಾರ್ಯಕ್ರಮ ಮೇ 31ರಂದು ಸಂಜೆ 4.30 ಗಂಟೆಗೆ ಪಡುಬಿದ್ರೆಯ ಕನ್ನಂಗಾರ್ ಬ್ರಹ್ಮಬೈದರ್ಕಳ ಗರೋಡಿಯಲ್ಲಿ ನಡೆಯಲಿದೆ.
ಈ ಚಾವಡಿ ತಮ್ಮನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳು ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ವಹಿಸುವರು. ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ ವೈ, ಜಾನಪದ ವಿದ್ವಾಂಸರು ಹಾಗೂ ತುಳು ಅಕಾಡೆಮಿ ಮಾಜಿ ಸದಸ್ಯರಾದ ಡಾ.ವೈ.ಎನ್. ಶೆಟ್ಟಿ , ಕನ್ನಂಗಾರ್ ಬ್ರಹ್ಮಬೈದರ್ಕಳ ಗರೋಡಿಯ ಅಧ್ಯಕ್ಷರಾದ ಶೀನ ಪೂಜಾರಿ , ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರಾದ ರಮೀಝ್ ಹುಸೇನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ತುಳು ಸಂಸ್ಕ್ರತಿ ಸಂಶೋಧಕರಾದ ನಿತೇಶ್ ಅಂಚನ್ ಅಭಿನಂದನಾ ಭಾಷಣ ಮಾಡುವರು, ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಹಾಗೂ ಸದಸ್ಯ ಸಂಚಾಲಕ ಉದ್ಯಾವರ ನಾಗೇಶ್ ಕುಮಾರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ತುಳು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.
ಇಂದು 60ನೇ ವರ್ಷಕ್ಕೆ ಪಾದಾರ್ಪಣೆ ಮಾಡಲಿರುವ ಸೈಯದ್ ನಾಸಿರ್ ಎರ್ಮಾಳ್ ಅವರು ತನ್ನ ಎಂಟನೇ ವರ್ಷ ಪ್ರಾಯದಿಂದ ನಾಗಸ್ವರ ವಾದನದಲ್ಲಿ ತೊಡಗಿಸಿಕೊಂಡು ಕಳೆದ 51 ವರ್ಷಗಳಿಂದ ಕಾಪು, ಮುದರಂಗಡಿ ,ಎರ್ಮಾಳ್, ಎಲ್ಲೂರು ಪ್ರದೇಶದ ದೇವಸ್ಥಾನಗಳಲ್ಲಿ, ದೈವಸ್ಥಾನದಲ್ಲಿ ವಾದ್ಯ ಸೇವೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಇನ್ನೂರು ವರ್ಷಗಳ ನಾಗಸ್ವರ ವಾದನ ಪರಂಪರೆ ಇರುವ ‘ವಾದ್ಯದ ಸಾಯಿಬೇರ್’ ಎಂಬ ಖ್ಯಾತಿಯ ಮನೆತನದ ಕೊಂಡಿಯಾಗಿರುವ ಸೈಯದ್ ನಾಸಿರ್ ಅವರು ತನ್ನ ತಂದೆ ಅನ್ವರ್ ಹುಸೇನ್ ಎರ್ಮಾಳ್ ಅವರಿಂದ ನಾಗಸ್ವರ ವಾದನ ಕಲಿತ್ತಿದ್ದರು. ನಾಸೀರ್ ಅವರ ಅಜ್ಜ, ಮುತ್ತಜ್ಜಂದಿರು ಕೂಡ ನಾಗಸ್ವರ ವಾದಕರಾಗಿದ್ದರು.
