ಮಂಗಳೂರು: ಬಂಟ ಸಮುದಾಯವು ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು, ಯುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಹಾಗೂ ಪ್ರೋತ್ಸಾಹ ದೊರೆತಾಗ ಇನ್ನಷ್ಟು ಕ್ರೀಡಾ ಸಾಧಕರು ಹೊರಹೊಮ್ಮಲು ಸಾಧ್ಯ ಎಂದು ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ಸದಸ್ಯ ಹಾಗೂ ನಮ್ಮ ಟಿವಿ ಚಾನೆಲ್ನ ಆಡಳಿತ ನಿರ್ದೇಶಕ ಡಾ. ಶಿವಶರಣ್ ಶೆಟ್ಟಿ ಅಭಿಪ್ರಾಯಪಟ್ಟರು.
ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೆಲ್ನಲ್ಲಿ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಆಯೋಜಿಸಲಾದ **‘ಬಂಟ ಕ್ರೀಡೋತ್ಸವ–2026’**ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರೀಡೆ ಕೇವಲ ಸ್ಪರ್ಧೆಯಲ್ಲ; ಅದು ಶಿಸ್ತು, ಸಂಘಟನಾ ಮನೋಭಾವ, ಸ್ನೇಹ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವ ಪ್ರಮುಖ ಮಾಧ್ಯಮವಾಗಿದೆ. ಇಂತಹ ಕ್ರೀಡೋತ್ಸವಗಳು ಯುವಜನರಲ್ಲಿ ಕ್ರೀಡಾಸಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಅವರ ಸಾಧನೆಗೆ ದಾರಿ ಮಾಡಿಕೊಡಲಿವೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ, ಸಮಾಜದ ಒಗ್ಗಟ್ಟು ಹಾಗೂ ಭಾವೈಕ್ಯತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಕ್ರೀಡೆಯ ಮೂಲಕ ವಿವಿಧ ಕ್ಷೇತ್ರಗಳ ಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಪ್ರಯತ್ನ ಇದಾಗಿದೆ ಎಂದರು.
ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜಯಶೀಲ ಅಡ್ಯಂತಾಯ ಅಡ್ಯಾರುಗುತ್ತು ಮಾತನಾಡಿ, ಕ್ರೀಡಾಕೂಟವನ್ನು ಅರ್ಥಪೂರ್ಣವಾಗಿ ಆಯೋಜಿಸಿರುವ ಸಂಘಟಕರನ್ನು ಅಭಿನಂದಿಸಿದರು.

ಮಾಜಿ ರಣಜಿ ಕ್ರಿಕೆಟ್ ಆಟಗಾರ ರಕ್ಷಣ್ ರೈ ಅವರು ಕ್ರೀಡಾಪಟುಗಳ ಪಥಸಂಚಲನಕ್ಕೆ ಚಾಲನೆ ನೀಡಿದರು. ಲಾತೂರಿನ ಉದ್ಯಮಿ ದಿವಾಕರ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನದ ಟ್ರಸ್ಟಿಗಳಾದ ಡಾ. ಆಶಾಜ್ಯೋತಿ ರೈ, ಕೃಷ್ಣಪ್ರಸಾದ್ ರೈ, ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯದರ್ಶಿ ಕರುಣಾಕರ ಶೆಟ್ಟಿ, ಜೊತೆ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ, ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಸದಾಶಿವ ಶೆಟ್ಟಿ ಬಿಜೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅನೂಪ್ ಶೆಟ್ಟಿ ಪ್ರಾರ್ಥಿಸಿದರು. ಬಂಟ ಕ್ರೀಡಾಕೂಟದ ಸಂಚಾಲಕ ಜಗದೀಶ್ ಶೆಟ್ಟಿ ಬಿಜೈ ಸ್ವಾಗತಿಸಿದರು. ಸಂಚಾಲಕ ಕಿರಣ್ ಪಕ್ಕಳ ಪೆರ್ಮಂಕಿಗುತ್ತು ವಂದಿಸಿದರು. ಗಣೇಶೋತ್ಸವ ಸಮಿತಿಯ ಸಮನ್ವಯಕಾರ ಸತೀಶ್ ಶೆಟ್ಟಿ ಕೊಡಿಯಾಲ್ಬೈಲ್ ಕಾರ್ಯಕ್ರಮ ನಿರೂಪಿಸಿದರು.




