ಮಂಗಳೂರು, ಜೂನ್ 9: ಸಮಾಜಸೇವೆಯ ಮೂಲಕ ದಿವಂಗತ ತಾಯಿಯ ಆದರ್ಶವನ್ನು ಜೀವಂತವಾಗಿರಿಸುವ ಉದ್ದೇಶದಿಂದ ಮೂಡುಶೆಡ್ಡೆ ಹೊಸಲಕ್ಕೆ ಕುಟುಂಬವು ಮಾನವೀಯ ಕಾರ್ಯವೊಂದನ್ನು ನೆರವೇರಿಸಿದೆ. ದಿವಂಗತ ದೇವಕಿ ಸಂಜೀವ ಶೆಟ್ಟಿ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಬಡ ಕುಟುಂಬಕ್ಕೆ ನೂತನವಾಗಿ ನಿರ್ಮಿಸಲಾದ ಸುಸಜ್ಜಿತ ಮನೆಯ ಹಸ್ತಾಂತರ ಕಾರ್ಯಕ್ರಮ ಮಂಗಳವಾರ ನೆರವೇರಿತು.
ಮೂಡುಶೆಡ್ಡೆ ನೇಜಿಗುರಿಯ ನಿವಾಸಿ ಗಿರಿಜ ಅವರ ಕುಟುಂಬವು ಹಲವು ವರ್ಷಗಳಿಂದ ವಾಸದ ಸಂಕಷ್ಟ ಅನುಭವಿಸುತ್ತಿದ್ದು, ಅವರ ಮನೆ ಸಂಪೂರ್ಣವಾಗಿ ಕುಸಿದುಬಿದ್ದ ಹಿನ್ನೆಲೆಯಲ್ಲಿ ವಕೀಲ ಉಮೇಶ್ ಶೆಟ್ಟಿ ಹೊಸಲಕ್ಕೆ ಹಾಗೂ ಅವರ ಸಹೋದರರು ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ನೂತನ ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿ, ಮನೆಯ ಕೀಲಿಯನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಕೀಲ ಉಮೇಶ್ ಶೆಟ್ಟಿ ಹೊಸಲಕ್ಕೆ, “ನಮ್ಮ ತಾಯಿ ದೇವಕಿ ಶೆಟ್ಟಿಯವರು ಸಂಕಷ್ಟದಲ್ಲಿರುವವರಿಗೆ ನೆರವಾಗುವುದನ್ನೇ ಜೀವನದ ಧ್ಯೇಯವನ್ನಾಗಿಸಿಕೊಂಡಿದ್ದರು. ಅವರ ಆದರ್ಶಗಳಿಂದ ಪ್ರೇರಿತರಾಗಿ ಸಮಾಜಕ್ಕೆ ಉಪಯುಕ್ತವಾದ ಸೇವೆ ಸಲ್ಲಿಸಬೇಕೆಂಬ ಸಂಕಲ್ಪದಿಂದ ಈ ಕಾರ್ಯ ಕೈಗೊಂಡಿದ್ದೇವೆ. ಗಿರಿಜ ಅವರ ಕುಟುಂಬಕ್ಕೆ ಸುರಕ್ಷಿತ ಹಾಗೂ ಸುಸಜ್ಜಿತ ಮನೆ ನಿರ್ಮಿಸಿ ಕೊಟ್ಟಿರುವುದು ನಮ್ಮ ಕುಟುಂಬಕ್ಕೆ ಸಂತೋಷ ತಂದಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೂಲ್ಕಿ-ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿ, “ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಸಂಸ್ಕಾರ ಹಾಗೂ ಸಮಾಜಸೇವೆಯ ಮನೋಭಾವ ಬೆಳೆಸುವುದು ಅಗತ್ಯ. ಹೊಸಲಕ್ಕೆ ಕುಟುಂಬದ ಈ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ” ಎಂದರು.

ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, “ಹೆತ್ತವರ ಆದರ್ಶಗಳನ್ನು ಉಳಿಸಿಕೊಂಡು ಬಡ ಕುಟುಂಬದ ಬದುಕಿಗೆ ಆಸರೆಯಾಗಿರುವುದು ಅತ್ಯಂತ ಶ್ಲಾಘನೀಯ. ಇದು ನಿಜವಾದ ಸೇವೆ ಹಾಗೂ ಭಗವಂತನ ಕಾರ್ಯ” ಎಂದು ಪ್ರಶಂಸಿಸಿದರು.
ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ, “ಜಾತಿ-ಮತ ಭೇದ ಮರೆತು ಸಮಾಜದ ಎಲ್ಲ ವರ್ಗದವರು ಒಗ್ಗೂಡಿದಾಗ ಇಂತಹ ಸೇವಾಕಾರ್ಯಗಳು ಸಾಧ್ಯವಾಗುತ್ತವೆ. ಹೊಸಲಕ್ಕೆ ಕುಟುಂಬದ ಸಾಮಾಜಿಕ ಕಳಕಳಿ ಎಲ್ಲರಿಗೂ ಮಾದರಿ” ಎಂದು ಹೇಳಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಉದ್ಯಮಿ ಇಬ್ರಾಹಿಂ ಗಡಿಯಾರ್, ಮಾಜಿ ಮೇಯರ್ ಭಾಸ್ಕರ್ ಮೊಯ್ಲಿ, ಮಂಜುನಾಥ್ ಭಂಡಾರಿ ಶೆಡ್ಡೆ, ಮಹೇಶ್ವರಪ್ಪ, ಮೂಡುಶೆಡ್ಡೆ ಪಂಚಾಯತ್ ಪಿಡಿಒ ಜಯಪ್ರಕಾಶ್, ಸುಂದರ ಬೆಳುವಾಯಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಕೊರಗ ಸಂಘದ ಮಾಜಿ ಜಿಲ್ಲಾಧ್ಯಕ್ಷ ರಮೇಶ್ ಎದುರುಪದವು ಮಾತನಾಡಿ, “ಮನೆ ಇಲ್ಲದ ಬಡ ಕುಟುಂಬಕ್ಕೆ ಆಶ್ರಯ ಒದಗಿಸಿರುವುದು ದೇವರು ಮೆಚ್ಚುವ ಕಾರ್ಯ. ಸಮಾಜದ ಅಶಕ್ತರಿಗೆ ನೆರವಾಗುವ ಮನೋಭಾವ ಹೆಚ್ಚಿದಾಗ ಸಮಾಜ ಇನ್ನಷ್ಟು ಸುಂದರವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
ಸಮಾಜಸೇವೆಯ ಮೂಲಕ ದಿವಂಗತ ದೇವಕಿ ಸಂಜೀವ ಶೆಟ್ಟಿ ಅವರ ಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದ ಹೊಸಲಕ್ಕೆ ಕುಟುಂಬದ ಈ ಕಾರ್ಯ ಸ್ಥಳೀಯರಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.


