ಹಾಸನ ಸಮೀಪ ಭೀಕರ ಅಪಘಾತ; ಹಿಂಬದಿಯಿಂದ ಬಂದ ಕಾರಿನ ಡಿಕ್ಕಿಗೆ ಕಾರು ಪಲ್ಟಿ – ಮೂವರಿಗೆ ಗಾಯ
ಮುಲ್ಕಿ/ಹಾಸನ, ಜು. 27: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಚೌಡೇನಹಳ್ಳಿ ಸಮೀಪ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮುಲ್ಕಿ ಮೂಲದ ಜನತಾದಳ (ಜಾತ್ಯತೀತ) ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಶಶಿಪ್ರಭಾ (47) ಅವರು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಕಾರಿನಲ್ಲಿದ್ದ ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ಶಶಿಪ್ರಭಾ ಅವರು ಮುಲ್ಕಿಯ ಕಾರ್ನಾಡ್ ಕೆ.ಎಸ್. ರಾವ್ ನಗರ, ಕೊರಂಟಬೆಟ್ಟು ನಿವಾಸಿಯಾಗಿದ್ದು, ಮುಲ್ಕಿ ನಗರ ಪಂಚಾಯತ್ನ ಮಾಜಿ ಅಧ್ಯಕ್ಷ ದಿವಂಗತ ಶಶಿಕಾಂತ್ ಶೆಟ್ಟಿ ಅವರ ಸಹೋದರಿಯಾಗಿದ್ದರು. ಅವರು ಜನತಾದಳ (ಜಾತ್ಯತೀತ) ಪಕ್ಷದ ಮುಲ್ಕಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದುದಲ್ಲದೆ, ಹಲವು ಸಾಮಾಜಿಕ, ಧಾರ್ಮಿಕ ಹಾಗೂ ಸೇವಾ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜನಮೆಚ್ಚುಗೆ ಗಳಿಸಿದ್ದರು.
ಅಪಘಾತದಲ್ಲಿ ಗಾಯಗೊಂಡಿರುವ ಕಾರ್ಕಳ ನಿವಾಸಿ ದಿನೇಶ್ (34), ಮಂಡ್ಯ ನಿವಾಸಿ ಸುಜನ್ (20) ಹಾಗೂ ಕಾರು ಚಾಲಕ ಅಖಿಲ್ (20) ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಶಶಿಪ್ರಭಾ ಅವರು ಹಾಸನ ಜಿಲ್ಲೆಯ ಬೆಳ್ಳೂರು ಕ್ರಾಸ್ ಸಮೀಪ ಯಶಸ್ವಿಯಾಗಿ ಹೋಟೆಲ್ (ಡಾಬಾ) ನಡೆಸುತ್ತಿದ್ದರು. ಭಾನುವಾರ ರಾತ್ರಿ ತಮ್ಮ ಕಾರು (KA-19-MM-4066)ದಲ್ಲಿ ಸ್ವಗ್ರಾಮ ಮುಲ್ಕಿಗೆ ಪ್ರಯಾಣಿಸುತ್ತಿದ್ದ ವೇಳೆ, ಸೋಮವಾರ ಮುಂಜಾನೆ ಸುಮಾರು 1.10 ಗಂಟೆಗೆ ಚೌಡೇನಹಳ್ಳಿ ಸಮೀಪ ರಸ್ತೆಯಲ್ಲಿ ಹಂದಿಯೊಂದು ಸತ್ತು ಬಿದ್ದಿರುವುದನ್ನು ಗಮನಿಸಿದ ಚಾಲಕ ಅಖಿಲ್ ಕಾರಿನ ವೇಗವನ್ನು ಕಡಿಮೆ ಮಾಡಿ ಬದಿಗೆ ಸರಿಸಿದ್ದರು.
ಈ ವೇಳೆ ಹಿಂಬದಿಯಿಂದ ಅತಿವೇಗದಲ್ಲಿ ಬಂದ ಫೋರ್ಡ್ ಕಾರು ರಸ್ತೆಯಲ್ಲಿದ್ದ ಹಂದಿಯ ಮೇಲೆಯೇ ಹರಿದು ನಿಯಂತ್ರಣ ತಪ್ಪಿ ಶಶಿಪ್ರಭಾ ಪ್ರಯಾಣಿಸುತ್ತಿದ್ದ ಕಾರಿಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಹಲವು ಬಾರಿ ಪಲ್ಟಿಯಾಗಿದ್ದು, ಹಿಂಬದಿ ಆಸನದಲ್ಲಿ ಕುಳಿತಿದ್ದ ಶಶಿಪ್ರಭಾ ಅವರಿಗೆ ತೀವ್ರ ಗಾಯಗಳಾಗಿವೆ. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದರು. ಅಪಘಾತ ಎಸಗಿದ ಕಾರಿನ ಚಾಲಕ ವಾಹನ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ.
ಮೃತರು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದು, ಕುಟುಂಬಸ್ಥರು, ಬಂಧು-ಬಳಗ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಈ ಕುರಿತು ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ವಾಹನ ಮತ್ತು ಅದರ ಚಾಲಕನ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸಾವಿಗೂ ಅರ್ಧ ಗಂಟೆ ಮೊದಲು ಪೂಜೆ ಕುರಿತು ಮಾತುಕತೆ
ಪರಿಶ್ರಮಿ ಉದ್ಯಮಿಯಾಗಿದ್ದ ಶಶಿಪ್ರಭಾ ಅವರು ಅಪಾರ ದೈವಭಕ್ತೆಯೂ ಆಗಿದ್ದರು. ತಮ್ಮ ಸಾವಿಗೂ ಸುಮಾರು ಅರ್ಧ ಗಂಟೆ ಮೊದಲು ಮುಲ್ಕಿ ಕೊಲಕಾಡಿಯ ವೇದಮೂರ್ತಿ ವಾದಿರಾಜ ಉಪಾಧ್ಯಾಯ ಅವರಿಗೆ ದೂರವಾಣಿ ಕರೆ ಮಾಡಿ ತಮ್ಮ ಮನೆಯಲ್ಲಿ ಪೂಜೆ ನಡೆಸುವ ಕುರಿತು ಚರ್ಚಿಸಿದ್ದರು. ಕೆಲವೇ ಕ್ಷಣಗಳಲ್ಲಿ ಅವರ ಅಕಾಲಿಕ ನಿಧನದ ಸುದ್ದಿ ತಿಳಿದು ತೀವ್ರ ದಿಗ್ಭ್ರಮೆಗೊಂಡ ವಾದಿರಾಜ ಉಪಾಧ್ಯಾಯರು, “ಇದು ವಿಧಿಯ ಕ್ರೂರ ಆಟ” ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ನಾಯಕರಿಂದ ಸಂತಾಪ
ಜನತಾದಳ (ಜಾತ್ಯತೀತ) ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಜಾಕೆ ಮಾಧವ ಗೌಡ ಅವರು ಶಶಿಪ್ರಭಾ ಅವರ ಅಕಾಲಿಕ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತೆ ಹಾಗೂ ಮುಲ್ಕಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆಯಾಗಿ ಅವರು ಸಲ್ಲಿಸಿದ ಸೇವೆ ಸದಾ ಸ್ಮರಣೀಯವಾಗಿರಲಿದೆ ಎಂದು ತಿಳಿಸಿರುವ ಅವರು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.
ಜಿಲ್ಲಾ ಪದಾಧಿಕಾರಿಗಳು, ತಾಲೂಕು ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಕೂಡ ಶಶಿಪ್ರಭಾ ಅವರ ಅಗಲಿಕೆಗೆ ತೀವ್ರ ಶೋಕ ವ್ಯಕ್ತಪಡಿಸಿ, ಕುಟುಂಬದ ಸದಸ್ಯರಿಗೆ ಸಂತಾಪ ಸೂಚಿಸಿದ್ದಾರೆ.

