ಮಂಗಳೂರು, ಜು. 25: ನಗರದ ಪ್ರತಿಷ್ಠಿತ ರೋಹನ್ ಕಾರ್ಪೊರೇಷನ್ ವತಿಯಿಂದ ‘ದಿ ಗ್ರಾಟಿಟ್ಯೂಡ್ ಗ್ಯಾದರಿಂಗ್ (The Gratitude Gathering)’ ಹೆಸರಿನ ವಿಶೇಷ ಕೃತಜ್ಞತಾ ಸಮಾರಂಭವು ನಗರದ ಬಿಜೈನಲ್ಲಿರುವ ರೋಹನ್ ಸಿಟಿಯಲ್ಲಿ ಅದ್ದೂರಿಯಾಗಿ ನಡೆಯಿತು. ಇತ್ತೀಚೆಗೆ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಕರಾವಳಿಯ ಪ್ರತಿಭೆಗಳನ್ನು ಗೌರವಿಸುವ ಉದ್ದೇಶದಿಂದ ಆಯೋಜಿಸಲಾದ ಈ ಸಮಾರಂಭದಲ್ಲಿ ಪ್ರಶಸ್ತಿ ವಿಜೇತರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಾದ ರೂಪಶ್ರೀ ವರ್ಕಾಡಿ, ನಿರ್ದೇಶಕ ಶಿವಧ್ವಜ್ ಶೆಟ್ಟಿ, ನಿರ್ಮಾಪಕ ಪ್ರಶಾಂತ್ ರೈ, ಡಾ. ಪ್ರದೀಪ್ ಕೆಂಚನೂರು ಹಾಗೂ ಬಾಲನಟ ಆತೀಶ್ ಎಸ್. ಶೆಟ್ಟಿ ಅವರನ್ನು ರೋಹನ್ ಕಾರ್ಪೊರೇಷನ್ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿರ್ದೇಶಕ ಶಿವಧ್ವಜ್ ಶೆಟ್ಟಿ, ಸಿನಿಮಾ ಕ್ಷೇತ್ರಕ್ಕೆ ರೋಹನ್ ಕಾರ್ಪೊರೇಷನ್ ನಿರಂತರವಾಗಿ ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯವಾಗಿದೆ ಎಂದು ಹೇಳಿದರು. ಇಂತಹ ಗೌರವಗಳು ಕಲಾವಿದರಿಗೆ ಮತ್ತಷ್ಟು ಸ್ಫೂರ್ತಿ ಹಾಗೂ ಜವಾಬ್ದಾರಿಯನ್ನು ನೀಡುತ್ತವೆ. ಕರ್ನಾಟಕ ಹಾಗೂ ಕರಾವಳಿಯಲ್ಲಿ ಉತ್ತಮ ಕಥಾವಸ್ತುಗಳ ಕೊರತೆಯಿಲ್ಲ. ಅವುಗಳನ್ನು ಪರಿಣಾಮಕಾರಿಯಾಗಿ ಚಿತ್ರರೂಪಕ್ಕೆ ತರಲು ಸಾಕಷ್ಟು ಅವಕಾಶಗಳಿವೆ. ತಮ್ಮ ಬಹುನಿರೀಕ್ಷಿತ ‘ಇಂಬು’ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಪ್ರೇಕ್ಷಕರು ಅದನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ರೂಪಶ್ರೀ ವರ್ಕಾಡಿ ಮಾತನಾಡಿ, ಕಲೆ ಮತ್ತು ಕಲಾವಿದರನ್ನು ಸದಾ ಬೆಂಬಲಿಸುತ್ತಿರುವ ರೋಹನ್ ಕಾರ್ಪೊರೇಷನ್ಗೆ ಕೃತಜ್ಞತೆ ಸಲ್ಲಿಸಿದರು. ರಾಷ್ಟ್ರೀಯ ಪ್ರಶಸ್ತಿ ವಿಜೇತರನ್ನು ಒಂದೇ ವೇದಿಕೆಯಲ್ಲಿ ಗೌರವಿಸಿರುವುದು ಸಂತಸದ ವಿಷಯವಾಗಿದ್ದು, ತಮಗೆ ಲಭಿಸಿರುವ ಈ ಗೌರವವನ್ನು ನಾಡಿನ ಜನತೆಗೆ ಅರ್ಪಿಸುತ್ತೇನೆ ಎಂದು ಹೇಳಿದರು.
ರೋಹನ್ ಕಾರ್ಪೊರೇಷನ್ನ ಡಿಯೋನ್ ಮೊಂತೆರೋ ಮಾತನಾಡಿ, ರಾಷ್ಟ್ರೀಯ ಪ್ರಶಸ್ತಿ ವಿಜೇತರಿಗೆ ಅಭಿನಂದನೆ ಸಲ್ಲಿಸಿದರು. ಮಂಗಳೂರು ಹಾಗೂ ಕರಾವಳಿಯ ಸಿನಿಮಾ ಕ್ಷೇತ್ರ ಇನ್ನಷ್ಟು ಬೆಳೆಯಬೇಕಿದ್ದು, ಇಲ್ಲಿನ ಕಲಾವಿದರ ಪ್ರತಿಭೆ, ಪರಿಶ್ರಮ ಮತ್ತು ಸಮರ್ಪಣೆಯೇ ಅವರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ ಎಂದು ಹೇಳಿದರು.
ಇದೇ ವೇಳೆ, ಇತ್ತೀಚೆಗೆ ನಗರದಲ್ಲಿ ವಿಜೃಂಭಣೆಯಿಂದ ನಡೆದ ‘ಆನ್ ಈವ್ನಿಂಗ್ ವಿತ್ ಶಾರುಖ್ ಖಾನ್’ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿಗೆ ಕಾರಣರಾದ ಅಭಿಮಾನಿಗಳು, ಬೆಂಬಲಿಗರು, ಸಹಯೋಗಿಗಳು ಹಾಗೂ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದಲೇ ‘ದಿ ಗ್ರಾಟಿಟ್ಯೂಡ್ ಗ್ಯಾದರಿಂಗ್’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ತುಷಾನ್ ಸ್ವಾಗತಿಸಿದರು. ಸಾಲೆಟ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಮಾರಂಭವು ಕಲಾವಿದರಿಗೆ ಗೌರವ ಸಲ್ಲಿಸುವುದರೊಂದಿಗೆ ಮಂಗಳೂರು ಸಿನಿಮಾ ಕ್ಷೇತ್ರದ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ನೀಡುವ ವೇದಿಕೆಯಾಗಿತ್ತು.

