ಮಂಗಳೂರು: ಪಳ್ಳಿ ದರ್ಸ್ ಎಂಬುದು ಇಸ್ಲಾಮಿನ ಪ್ರಾಚೀನ ಪರಂಪರೆಯಿಂದ ಬಂದಿರುವ ಶ್ರೇಷ್ಠ ಜ್ಞಾನ ವ್ಯವಸ್ಥೆಯಾಗಿದ್ದು, ಮಸೀದಿಯಲ್ಲಿ ದರ್ಸ್ ಆರಂಭವಾಗುವುದು ಆ ಊರಿನ ಆತ್ಮಿಕ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ಹೊಸ ಬೆಳಕು ಮೂಡಿದಂತೆಯೇ ಎಂದು ಕುಂಬ್ರಾ ಮರ್ಕಝುಲ್ ಹುದಾ ಪ್ರಾಂಶುಪಾಲ ಯು.ಕೆ. ಮುಹಮ್ಮದ್ ಸಅದಿ ಅಭಿಪ್ರಾಯಪಟ್ಟರು.
ಅವರು ಬದ್ರಿಯ ಜುಮಾ ಮಸೀದಿ, ಮಲ್ಲಾರು–ಮಜೂರಿನಲ್ಲಿ ಆಯೋಜಿಸಲಾದ “ಪಳ್ಳಿ ದರ್ಸ್” ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದರು. ದರ್ಸ್ ಪರಂಪರೆಯನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಅವರು ಕರೆ ನೀಡಿದರು.
ಸಮಾರಂಭದಲ್ಲಿ ದುಆ ಆಶೀರ್ವಚನ ನೀಡಿದ ಸಯ್ಯಿದ್ ಮುಹಮ್ಮದ್ ಮೌಲಾ ಜಮಲುಲ್ಲೈಲಿ ತಂಙಳ್ ಅವರು, ದರ್ಸ್ ಕೇವಲ ಧಾರ್ಮಿಕ ಶಿಕ್ಷಣ ನೀಡುವ ಕೇಂದ್ರವಲ್ಲ, ಉತ್ತಮ ವ್ಯಕ್ತಿತ್ವ ಮತ್ತು ಮೌಲ್ಯಗಳನ್ನು ರೂಪಿಸುವ ಜ್ಞಾನ ಮಂದಿರವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಮಾತ್ ಅಧ್ಯಕ್ಷ ಡಾ. ಎಂ. ಫಾರೂಕ್ ಚಂದ್ರನಗರ ಮಾತನಾಡಿ, “ನಮ್ಮ ಊರಿನಲ್ಲಿ ಪಳ್ಳಿ ದರ್ಸ್ ಆರಂಭವಾಗಬೇಕೆಂಬ ಕನಸು ಇಂದು ನನಸಾಗಿದೆ. ಈ ಮಹತ್ವದ ಕಾರ್ಯಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಜಮಾತ್ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ” ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಖತೀಬ್ ಅಬ್ದುರ್ರಶೀದ್ ಸಖಾಫಿ ಅಲ್ ಕಾಮಿಲ್, ಮುದರ್ರಿಸ್ ಸಯ್ಯಿದ್ ಮುಹಮ್ಮದ್ ಶಹೀರ್ ಅಲ್ ಹಿಕಮೀ ಅಲ್ ಹಿಷಾಮೀ ಅವರು ದರ್ಸ್ ಶಿಕ್ಷಣದ ಮಹತ್ವದ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸದ್ರ್ ಉಸ್ತಾದ್ ಅಬೂಬಕರ್ ಸಿದ್ದೀಕ್ ಸಅದಿ, ತಾಜುದ್ದೀನ್ ಸಖಾಫಿ, ಅಶ್ರಫ್ ಮದನಿ, ತೌಸೀಫ್ ಹನೀಫೀ, ಅಬ್ದುರ್ರಹ್ಮಾನ್ ಸಅದಿ, ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಮೂಸ, ಉಪಾಧ್ಯಕ್ಷ ಹಸನಬ್ಬ ಮಜೂರು, ಕಾರ್ಯದರ್ಶಿಗಳಾದ ಅಶ್ರಫ್ ಕರಂದಾಡಿ, ರಜಬ್ ಕರಂದಾಡಿ, ಕೋಶಾಧಿಕಾರಿ ಪಿ.ಎಂ. ಇಬ್ರಾಹಿಂ ಪಾದೂರು, ಜಮಾತ್ ಸಮಿತಿ ಸದಸ್ಯರು ಹಾಗೂ ಅಪಾರ ಸಂಖ್ಯೆಯ ಜಮಾತ್ ಬಂಧುಗಳು ಉಪಸ್ಥಿತರಿದ್ದರು.
ಪಳ್ಳಿ ದರ್ಸ್ ಆರಂಭದೊಂದಿಗೆ ಮಲ್ಲಾರು–ಮಜೂರು ಪ್ರದೇಶದಲ್ಲಿ ಧಾರ್ಮಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಹೊಸ ಆಯಾಮ ದೊರೆತಿದ್ದು, ಸ್ಥಳೀಯರಲ್ಲಿ ಸಂತಸ ಮನೆಮಾಡಿದೆ.

