ಮಂಗಳೂರು: ಮಾಜಿ ಪ್ರಧಾನಮಂತ್ರಿ, ಜನತಾದಳ (ಜಾತ್ಯತೀತ) ಪಕ್ಷದ ಹಿರಿಯ ನಾಯಕ ಹಾಗೂ ದೇಶದ ಹಿರಿಯ ರಾಜಕಾರಣಿಗಳಾದ ಶ್ರೀ ಎಚ್.ಡಿ. ದೇವೇಗೌಡರವರ ಜನ್ಮದಿನದ ಅಂಗವಾಗಿ ಜನತಾದಳ (ಜಾತ್ಯತೀತ) ಪಕ್ಷದ ವತಿಯಿಂದ ಮಂಗಳೂರಿನ ಲೇಡಿಗೋಷನ್ ಸಮೀಪದ ರೆಡ್ ಕ್ರಾಸ್ ರಕ್ತ ನಿಧಿ ಕೇಂದ್ರದಲ್ಲಿ ಅರ್ಥಪೂರ್ಣ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ದೇವೇಗೌಡರವರ ಜನ್ಮದಿನವನ್ನು ಆಚರಿಸುವ ಉದ್ದೇಶದಿಂದ ಆಯೋಜಿಸಲಾದ ಈ ಶಿಬಿರದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಯುವಕರು ಉತ್ಸಾಹದಿಂದ ಭಾಗವಹಿಸಿದರು.

ಕಾರ್ಯಕ್ರಮವನ್ನು ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಶ್ರೀ ಜಾಕೆ ಮಾಧವ ಗೌಡ ಉದ್ಘಾಟಿಸಿ ಮಾತನಾಡಿ, “ಶ್ರೀ ಎಚ್.ಡಿ. ದೇವೇಗೌಡರು ತಮ್ಮ ರಾಜಕೀಯ ಜೀವನದುದ್ದಕ್ಕೂ ರೈತರು, ಬಡವರು ಹಾಗೂ ಹಿಂದುಳಿದ ವರ್ಗಗಳ ಪರವಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಜನ್ಮದಿನವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಸಮಾಜಕ್ಕೆ ಉಪಯೋಗವಾಗುವ ಸೇವಾ ಕಾರ್ಯಗಳ ಮೂಲಕ ಸ್ಮರಿಸುವುದು ಪಕ್ಷದ ಉದ್ದೇಶವಾಗಿದೆ. ರಕ್ತದಾನವು ಮಾನವೀಯತೆಯ ಪ್ರತೀಕವಾಗಿದ್ದು, ಒಂದು ರಕ್ತದಾನ ಹಲವಾರು ಜೀವಗಳನ್ನು ಉಳಿಸಬಲ್ಲದು. ಯುವಜನತೆ ಇಂತಹ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು” ಎಂದು ಕರೆ ನೀಡಿದರು.

ಶಿಬಿರದಲ್ಲಿ ಪಕ್ಷದ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಯೋಗಿಶ್ ಶೆಟ್ಟಿ ಜಪ್ಪು ಅವರು ಮೊದಲಿಗೆ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, “ದೇವೇಗೌಡರು ಸದಾ ಸಮಾಜಮುಖಿ ಚಿಂತನೆ ಹಾಗೂ ಸೇವಾ ಮನೋಭಾವವನ್ನು ಹೊಂದಿದ ನಾಯಕರು. ಅವರ ಆದರ್ಶ, ತ್ಯಾಗ ಮತ್ತು ಜನಪರ ಚಿಂತನೆಗಳಿಂದ ನಾವು ಪ್ರೇರಿತರಾಗಿದ್ದೇವೆ. ಅವರ ಜನ್ಮದಿನದ ಅಂಗವಾಗಿ ರಕ್ತದಾನ ಮಾಡುವ ಅವಕಾಶ ದೊರೆತಿರುವುದು ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಇನ್ನಷ್ಟು ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುವುದು” ಎಂದರು.
ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷರಾದ ಶಶಿರಾಜ್ ಶೆಟ್ಟಿ ಕೊಳಂಬೆ ಮಾತನಾಡಿ, “ದೇವೇಗೌಡರು ದೇಶದ ರಾಜಕೀಯದಲ್ಲಿ ಮೌಲ್ಯಾಧಾರಿತ ರಾಜಕಾರಣಕ್ಕೆ ಮಾದರಿಯಾಗಿದ್ದಾರೆ. ಸಾಮಾನ್ಯ ಜನರ ಬದುಕು ಸುಧಾರಣೆಗೆ ಅವರು ಮಾಡಿದ ಸೇವೆ ಸದಾ ಸ್ಮರಣೀಯ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರಾದ ನ್ಯಾಯವಾದಿ ವೈ. ಉಮೇಶ್ ಗೌಡ, ಮುನೀರ್ ಮುಕ್ಕಚೇರಿ, ಪ್ರಶಾಂತ್ ಭಟ್ ಕಡಬ, ಶಾರದ ಶೆಟ್ಟಿ ಅತ್ತಾವರ ಸೇರಿದಂತೆ ಅನೇಕರು ಉಪಸ್ಥಿತರಿದ್ದು, ರಕ್ತದಾನ ಶಿಬಿರದ ಯಶಸ್ಸಿಗೆ ಸಹಕರಿಸಿದರು. ಶಶಿದರ್ ಎಂ ಮತ್ತು ಇತರ ಕಾರ್ಯಕರ್ತರು ರಕ್ತದಾನ ಮಾಡುವ ಮೂಲಕ ಮಾನವೀಯ ಸೇವೆಗೆ ಕೈಜೋಡಿಸಿದರು.
ರಕ್ತದಾನ ಶಿಬಿರದ ಬಳಿಕ ಜಪ್ಪುವಿನ ಭಗಿನಿ ಸಮಾಜಕ್ಕೆ ಭೇಟಿ ನೀಡಿದ ಜೆಡಿಎಸ್ ಮುಖಂಡರು ಅಲ್ಲಿನ ಮಕ್ಕಳಿಗೆ ಹಣ್ಣು-ಹಂಪಲು ಹಾಗೂ ಆಹಾರ ವಿತರಿಸಿದರು. ಇದೇ ವೇಳೆ ಮಕ್ಕಳಿಗೆ ಶ್ರೀ ಎಚ್.ಡಿ. ದೇವೇಗೌಡರವರ ಸರಳತೆ, ತ್ಯಾಗ, ಜನಪರ ಆಡಳಿತ ಹಾಗೂ ಸಮಾಜಸೇವೆಯ ಆದರ್ಶಗಳ ಕುರಿತು ತಿಳಿಸಿ, ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಿದರು.
ಒಟ್ಟಾರೆಯಾಗಿ, ದೇವೇಗೌಡರವರ ಜನ್ಮದಿನವನ್ನು ಸೇವಾ ಕಾರ್ಯಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ ಜೆಡಿಎಸ್ ಕಾರ್ಯಕರ್ತರ ಈ ಕಾರ್ಯಕ್ರಮ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಯಿತು ಎಂದು ಆಯೋಜಕರು ತಿಳಿಸಿದ್ದಾರೆ.


