ಮಂಗಳೂರು, ಮೇ 14 : ಮಂಗಳೂರಿನ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಸಮಾಜಸೇವಕ ಹಾಗೂ ‘ಲ್ಯಾನ್ಸಿ ಕನ್ಸ್ಟ್ರಕ್ಷನ್ಸ್’ ಸಂಸ್ಥೆಯ ಸ್ಥಾಪಕರಾದ ಲ್ಯಾನ್ಸಿ ಜೋಸೆಫ್ ಮಸ್ಕರೇನಸ್ (77) ಅವರು ಅಲ್ಪಕಾಲದ ಅಸ್ವಸ್ಥತೆಯ ಬಳಿಕ ಬುಧವಾರ ನಿಧನರಾದರು. ಅವರ ಅಗಲಿಕೆಯಿಂದ ದಕ್ಷಿಣ ಕನ್ನಡ ಜಿಲ್ಲೆ ತನ್ನೊಬ್ಬ ಹಿರಿಯ ಉದ್ಯಮಿ, ದಾನಿ ಹಾಗೂ ಎಲ್ಲ ಸಮುದಾಯಗಳ ವಿಶ್ವಾಸ ಗಳಿಸಿದ್ದ ವ್ಯಕ್ತಿತ್ವವನ್ನು ಕಳೆದುಕೊಂಡಂತಾಗಿದೆ.
ಮೃತರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಉದ್ಯಮ ವಲಯ, ಧಾರ್ಮಿಕ ಮುಖಂಡರು ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ , ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅದ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ಲಂಬರ್ನಿಂದ ಬೃಹತ್ ಉದ್ಯಮಿಯಾಗಿ ಬೆಳೆದ ಸಾಧಕ
1973ರಲ್ಲಿ ಪರವಾನಗಿ ಪಡೆದ ಪ್ಲಂಬರ್ ಆಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದ ಲಾಸ್ಸಿ ಜೋಸೆಫ್ ಮಸ್ಕರೇನಸ್ ಅವರು ಪರಿಶ್ರಮ, ಪ್ರಾಮಾಣಿಕತೆ ಮತ್ತು ದೂರದೃಷ್ಟಿಯಿಂದ ಹಂತ ಹಂತವಾಗಿ ಸಿವಿಲ್ ಕಾಂಟ್ರಾಕ್ಟರ್ ಆಗಿ ಗುರುತಿಸಿಕೊಂಡರು. ಬಳಿಕ ನಿರ್ಮಾಣ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಮಂಗಳೂರಿನ ನಗರಾಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದರು.
1982ರಲ್ಲಿ ಹಂಪನಕಟ್ಟೆಯಲ್ಲಿ ‘ಧನ್ಯವಾದ್’ ಕಟ್ಟಡ ನಿರ್ಮಾಣ ಮಾಡುವ ಮೂಲಕ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭಿಸಿದ ಅವರು, 1984ರಲ್ಲಿ ‘ಪಾಂಡ ಶೆಡ್ ಅಪಾರ್ಟ್ಮೆಂಟ್’ ನಿರ್ಮಿಸಿ ಗಮನ ಸೆಳೆದರು. ನಂತರ ಎಲ್ಎನ್ ಪ್ರಮೋಟರ್ಸ್, ನಿಶಾಲ್ ಅಸೋಸಿಯೇಟ್ಸ್ ಸೇರಿದಂತೆ ಹಲವು ಸಂಸ್ಥೆಗಳ ಮೂಲಕ ಸಾವಿರಾರು ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿ ಬೃಹತ್ ಉದ್ಯಮ ಸಾಮ್ರಾಜ್ಯ ನಿರ್ಮಿಸಿದರು.
ಧಾರ್ಮಿಕ ಸೌಹಾರ್ದತೆ ಹಾಗೂ ಸಮಾಜಸೇವೆಯಲ್ಲಿ ಅಪಾರ ಕೊಡುಗೆ
ಲ್ಯಾನ್ಸಿ ಜೋಸೆಫ್ ಮಸ್ಕರೇನಸ್ ಅವರು ಕೇವಲ ಉದ್ಯಮಿಯಾಗಿರದೆ ಸಮಾಜಮುಖಿ ಚಿಂತನೆ ಹೊಂದಿದ ದಾನಶೂರರಾಗಿದ್ದರು. ಜಿಲ್ಲೆಯ ಎಲ್ಲ ಸಮುದಾಯಗಳ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು, ಧಾರ್ಮಿಕ ಸೌಹಾರ್ದತೆಗೆ ಸದಾ ಆದ್ಯತೆ ನೀಡುತ್ತಿದ್ದರು.
ಬಜ್ಪೆ ಚರ್ಚ್, ಬಿಕರ್ನಕಟ್ಟೆಯ ಇನ್ಫೆಂಟ್ ಜೀಸಸ್ ಚರ್ಚ್ ಸೇರಿದಂತೆ 25ಕ್ಕೂ ಅಧಿಕ ಚರ್ಚ್ಗಳ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಲ್ಲದೆ, 4 ಮಸೀದಿಗಳು ಹಾಗೂ 3 ದೇವಾಲಯಗಳ ನಿರ್ಮಾಣದಲ್ಲೂ ಪ್ರಮುಖ ಪಾತ್ರವಹಿಸಿದ್ದರು. ಧರ್ಮಭೇದವಿಲ್ಲದೆ ಸಮಾಜ ಸೇವೆ ಮಾಡುತ್ತಿದ್ದ ಅವರ ವ್ಯಕ್ತಿತ್ವಕ್ಕೆ ಸಾರ್ವಜನಿಕ ವಲಯದಲ್ಲಿ ಅಪಾರ ಗೌರವವಿತ್ತು.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೂ ಮಹತ್ವದ ಸೇವೆ
ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಯಲ್ಲೂ ಅವರು ಅಪಾರ ಆಸಕ್ತಿ ತೋರಿದ್ದರು. ಸೇಂಟ್ ಅಲೋಶಿಯಸ್ ಕಾಲೇಜಿನ ಆಡಳಿತ ಮಂಡಳಿ ಬೋರ್ಡ್, ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಹಾಗೂ ಯುನಿಟಿ ಹೆಲ್ತ್ ಕಾಂಪ್ಲೆಕ್ಸ್ನ ನರ್ಸಿಂಗ್ ಶಾಲೆಯ ನಿರ್ವಹಣೆಯಲ್ಲಿ ಅವರ ಸಂಸ್ಥೆಯ ಮಹತ್ವದ ಪಾತ್ರವಿತ್ತು.
ಹಲವು ಪ್ರಶಸ್ತಿಗಳಿಗೆ ಭಾಜನ
ಉದ್ಯಮಶೀಲತೆ, ಸಾಮಾಜಿಕ ಬದ್ಧತೆ ಹಾಗೂ ಮಾನವೀಯ ಸೇವೆಯನ್ನು ಗುರುತಿಸಿ ಇವರ ಉದ್ಯಮಶೀಲತೆ ಮತ್ತು ವೃತ್ತಿಪರತೆಯನ್ನು ಗುರುತಿಸಿ 2006 ರಲ್ಲಿ ‘ರಚನಾ ವರ್ಷದ ಉದ್ಯಮಿ’ ಪ್ರಶಸ್ತಿ, 2012 ರಲ್ಲಿ ‘ಎಫ್ಕೆಸಿಎ ವೃತ್ತಿಪರ ಶ್ರೇಷ್ಠತಾ ಪ್ರಶಸ್ತಿ’ ನೀಡಿ ಗೌರವಿಸಲಾಗಿತ್ತು . ವಿವಿಧ ಸಂಘ-ಸಂಸ್ಥೆಗಳು ಕೂಡ ಅವರನ್ನು ಸನ್ಮಾನಿಸಿ ಗೌರವಿಸಿದ್ದವು.
ಸಾರ್ವಜನಿಕರಿಂದ ಶ್ರದ್ಧಾಂಜಲಿ
ಲ್ಯಾನ್ಸಿ ಜೋಸೆಫ್ ಮಸ್ಕರೇನಸ್ ಅವರ ಅಗಲಿಕೆಗೆ ವಿವಿಧ ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು, ಉದ್ಯಮಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಸಂತಾಪ ಸೂಚಿಸಿದ್ದಾರೆ. “ಸರಳ ವ್ಯಕ್ತಿತ್ವದ ಮಹಾನ್ ಸಾಧಕ”, “ಉದ್ಯಮ ಮತ್ತು ಮಾನವೀಯತೆಯ ಸಂಗಮ” ಎಂದು ಹಲವರು ಅವರನ್ನು ಸ್ಮರಿಸಿದ್ದಾರೆ.
ಅವರ ಅಂತ್ಯಕ್ರಿಯೆ ಸಂಬಂಧಿಸಿದ ಮಾಹಿತಿ ಕುಟುಂಬದವರು ಬಳಿಕ ಪ್ರಕಟಿಸಲಿದ್ದಾರೆ.…





