ರಾಜ್ಯದಲ್ಲಿ ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯತ್ಗಳ ಆಡಳಿತ ನಿರಂತರವಾಗಿ ನಡೆಯುವಂತೆ ಮಾಡಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಚುನಾವಣೆ ನಡೆಸಲು ವಿಳಂಬವಾಗಿರುವ ಹಿನ್ನೆಲೆಯಲ್ಲಿ, ಅವಧಿ ಮುಗಿದ ಗ್ರಾಮ ಪಂಚಾಯತ್ಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡುವ ಪ್ರಕ್ರಿಯೆಗೆ ಸರ್ಕಾರ ಅಧಿಕೃತವಾಗಿ ಚಾಲನೆ ನೀಡಿದೆ.
ಸಂವಿಧಾನದ ಅನುಚ್ಛೇದ 243-ಇ ಅನ್ವಯ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ–1993ರ ಕಲಂ 41 ಮತ್ತು 42ರ ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದೆ. ಅವಧಿ ಮುಕ್ತಾಯಗೊಂಡ ಗ್ರಾಮ ಪಂಚಾಯತ್ಗಳಿಗೆ ತಾತ್ಕಾಲಿಕವಾಗಿ ಆಡಳಿತಾಧಿಕಾರಿಗಳು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ರಾಜ್ಯಾದ್ಯಂತ ಐದು ವರ್ಷಗಳ ಅವಧಿ ಪೂರ್ಣಗೊಂಡಿರುವ ಎಲ್ಲಾ ಗ್ರಾಮ ಪಂಚಾಯತ್ಗಳಿಗೆ ಆಡಳಿತಾಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಗ್ರಾಮ ಪಂಚಾಯತ್ಗಳ ದಿನನಿತ್ಯದ ಆಡಳಿತ, ಸಾರ್ವಜನಿಕ ಸೇವೆಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಸುಗಮವಾಗಿ ಮುಂದುವರಿಸುವ ಜವಾಬ್ದಾರಿ ಅವರಿಗೆ ವಹಿಸಲಾಗಿದೆ.
2020–2025ರ ಅವಧಿಯ ಗ್ರಾಮ ಪಂಚಾಯತ್ಗಳ ಆಡಳಿತಾವಧಿ ಮುಕ್ತಾಯಗೊಂಡಿದ್ದು, 2026ರ ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಚುನಾವಣೆ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ತಾತ್ಕಾಲಿಕ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.
2026–2031ರ ಅವಧಿಗೆ ಚುನಾವಣೆ ನಡೆಯುವವರೆಗೆ ಆಡಳಿತಾಧಿಕಾರಿಗಳು ಕಾರ್ಯನಿರ್ವಹಿಸಲಿದ್ದು, ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ–1993ರ ಸೆಕ್ಷನ್ 8(iii) ಸೇರಿದಂತೆ ಸಂಬಂಧಿತ ವಿಧಿಗಳ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ.
ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಗ್ರಾಮೀಣ ಪ್ರದೇಶಗಳ ಸಾರ್ವಜನಿಕ ಸೇವೆಗಳು ಹಾಗೂ ಅಭಿವೃದ್ಧಿ ಕಾರ್ಯಗಳು ಯಾವುದೇ ಅಡೆತಡೆ ಇಲ್ಲದೆ ಮುಂದುವರಿಯಲಿವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.




