ಮಂಗಳೂರು, ಏಪ್ರಿಲ್ 13: ಮಂಗಳೂರಿನ ಪ್ರತಿಷ್ಠಿತ ವಕೀಲರ ಸಂಘ (ರಿ.) 1881 ವತಿಯಿಂದ ಆಯೋಜಿಸಲಾದ ವಕೀಲರ ತಂಡಗಳ ಕ್ರಿಕೆಟ್ ಪ್ರೀಮಿಯರ್ ಲೀಗ್ ಭರ್ಜರಿ ಯಶಸ್ಸಿನೊಂದಿಗೆ ಎನ್ಎಂಪಿಟಿ ಗ್ರೌಂಡ್ನಲ್ಲಿ ನಡೆಯಿತು.

ಒಂದು ದಿನದ ಈ ಕ್ರೀಡಾ ಹಬ್ಬದಲ್ಲಿ ಸುಮಾರು ಎಂಟು ವಕೀಲರ ಕ್ರಿಕೆಟ್ ತಂಡಗಳು ಭಾಗವಹಿಸಿ ಕ್ರೀಡಾಸ್ಪೂರ್ತಿಯ ಜೊತೆಗೆ ಕಠಿಣ ಪೈಪೋಟಿಯನ್ನು ಪ್ರದರ್ಶಿಸಿದವು. ಪಂದ್ಯಾವಳಿಯು ಪ್ರೇಕ್ಷಕರಲ್ಲಿ ಉತ್ಸಾಹ ಹುಟ್ಟಿಸಿದ್ದು, ಕ್ರೀಡಾಭಿಮಾನಿಗಳ ಗಮನ ಸೆಳೆದಿತು.

ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಬಾರ್ ಟೈಗರ್ಸ್ ತಂಡ, ರಾಘವೇಂದ್ರ ರಾವ್ ಅವರ ಮಾಲೀಕತ್ವದಲ್ಲಿ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು. ಸಮಬಲದ ಪೈಪೋಟಿ ನೀಡಿದ ಬಾರ್ ಪ್ಯಾಂಥರ್ಸ್ ತಂಡ, ರವಿಕುಮಾರ್ ಅವರ ನೇತೃತ್ವದಲ್ಲಿ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.
ಈ ಕ್ರೀಡಾಕೂಟವು ವಕೀಲರ ನಡುವಿನ ಸ್ನೇಹಭಾವವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ಒತ್ತಡದ ವೃತ್ತಿಜೀವನದಲ್ಲಿ ಮನರಂಜನೆಯ ಕ್ಷಣಗಳನ್ನು ನೀಡಿದ ಮಹತ್ವದ ವೇದಿಕೆಯಾಗಿ ಪರಿಣಮಿಸಿತು. ಕಾರ್ಯಕ್ರಮದ ಯಶಸ್ಸಿಗೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರ ಶ್ರಮ ಶ್ಲಾಘನೀಯವಾಗಿದೆ.

