ಮಂಗಳೂರಿನ ಹಂಪನ್ಕಟ್ಟೆಯ ವೈಟ್ ಸ್ಟೋನ್ ಪ್ರೀಮಿಯರ್ ಇನ್ ಸಭಾಂಗಣದಲ್ಲಿ ಗುರುವಾರ ನಡೆದ ವೈಟ್ ಸ್ಟೋನ್ ಶರೀಫ್ ಹಾಜಿಯವರ ಸನ್ಮಾನ ಕಾರ್ಯಕ್ರಮವು ಅಪಾರ ಆತ್ಮೀಯತೆ ಹಾಗೂ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು.
ಮಂಗಳೂರು ಗೆಳೆಯರ ಬಳಗದ ವತಿಯಿಂದ ಆಯೋಜಿಸಲಾದ ಈ ಸಮಾರಂಭದಲ್ಲಿ, ಶರೀಫ್ ಹಾಜಿಯವರ ವ್ಯಕ್ತಿತ್ವ, ನಿಸ್ವಾರ್ಥ ಸೇವೆ ಹಾಗೂ ಮೌನ ದಾನಧರ್ಮಗಳನ್ನು ಅನೇಕ ಗಣ್ಯರು ಹೃದಯಸ್ಪರ್ಶಿಯಾಗಿ ವಿವರಿಸಿದರು. ಸಾಮಾನ್ಯವಾಗಿ ಕಂಡುಬರುವ ಔಪಚಾರಿಕ ಮಾತುಗಳಿಗೆ ಬದಲಾಗಿ, ಅತಿಥಿಗಳೆಲ್ಲರೂ ಮನದಾಳದಿಂದ ಬಂದ ಅನುಭವಗಳನ್ನು ಹಂಚಿಕೊಂಡಿದ್ದು ಕಾರ್ಯಕ್ರಮದ ವಿಶೇಷತೆಯಾಗಿತ್ತು.
ಶರೀಫ್ ಹಾಜಿಯವರ ದಾನಧರ್ಮದ ಅನೇಕ ಘಟನೆಗಳು ಸಭೆಯಲ್ಲಿ ಅನಾವರಣಗೊಂಡವು. ಬಡ ಮಹಿಳೆಗೆ ಹೊಲಿಗೆ ಯಂತ್ರ ನೀಡಿದ ಸಂದರ್ಭದಲ್ಲೂ ಫೋಟೋ ತೆಗೆದು ಪ್ರಸಾರ ಮಾಡುವುದನ್ನು ನಿರಾಕರಿಸಿ, “ಅವಳ ಗೌರವ ಕಾಪಾಡಿ, ಉದ್ಯೋಗಕ್ಕೆ ಪ್ರೋತ್ಸಾಹ ನೀಡಿ” ಎಂಬ ಅವರ ಮನೋಭಾವ ಎಲ್ಲರ ಮನ ಗೆದ್ದಿತು.
ಇದೇ ರೀತಿ “ನಂಡೆ ಪೆಂಙಳ್” ಸಾಮೂಹಿಕ ವಿವಾಹ ಯೋಜನೆಗೆ ಅವರು ನೀಡಿದ ನಿರೀಕ್ಷೆಗೂ ಮೀರಿದ ಸಹಾಯಧನವನ್ನು ಆಝಾದ್ ಮನ್ಸೂರ್ ಹಾಜಿ ಸ್ಮರಿಸಿದರು. ಸಮಾಜ ಸೇವೆಗೆ ಸಂಬಂಧಿಸಿದ ಯಾವುದೇ ಕಾರ್ಯಕ್ಕೂ ಶರೀಫ್ ಹಾಜಿಯವರು “ಇಲ್ಲ” ಎಂದಿಲ್ಲ ಎಂಬುದನ್ನು ಗಣ್ಯರು ವಿಶೇಷವಾಗಿ ಉಲ್ಲೇಖಿಸಿದರು.
ಪ್ರೇರಣಾದಾಯಕ ಭಾಷಣಗಳ ಮೂಲಕ ಶರೀಫ್ ಹಾಜಿಯವರ ಮೌನ ಸೇವೆಯನ್ನು ಗುರುತಿಸಿದವರಲ್ಲಿ ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾ, ಪ್ರದೀಪ್ ಕುಮಾರ್ ಕಲ್ಕೂರ, ರವೀಂದ್ರ ಶೆಟ್ಟಿ ಉಳಿದೊಟ್ಟು, ವಾಲ್ಟರ್ ನಂದಳಿಕೆ, ಹರ್ಷದ್ ಕಂದಕ್ ಹಾಗೂ ಸಿ.ಆರ್. ಅಬೂಬಕರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
“ವೈಟ್ ಸ್ಟೋನ್” ಎಂಬ ಹೆಸರಿನಂತೆ ಶರೀಫ್ ಹಾಜಿಯವರು ರೂಪದಲ್ಲೂ, ಮನಸ್ಸಲ್ಲೂ, ನಡೆ-ನುಡಿಗಳಲ್ಲೂ ಶುದ್ಧತೆಯ ಪ್ರತೀಕವಾಗಿದ್ದಾರೆ ಎಂಬ ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾದವು.
ಕಾರ್ಯಕ್ರಮದಲ್ಲಿ ಗೆಳೆಯರ ಬಳಗದ ಅಧ್ಯಕ್ಷ ಡಿ.ಐ. ಅಬೂಬಕರ್ ಕೈರಂಗಳ ಸ್ವಾಗತಿಸಿದರು. ಕಾರ್ಯದರ್ಶಿ ಸಾಜಿದ್ ಉಳ್ಳಾಲ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಸಿರಿಲ್ ಡಿ’ಸೋಜಾ ಅಭಿನಂದನಾ ಪತ್ರವನ್ನು ವಾಚಿಸಿದರು.
ಕೊನೆಯಲ್ಲಿ, ಶರೀಫ್ ಹಾಜಿಯವರಿಗೆ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯ ಲಭಿಸಲಿ, ಅವರ ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆಗಳು ಇನ್ನಷ್ಟು ವಿಸ್ತರಿಸಲಿ ಎಂದು ಸಭಿಕರು ಹಾರೈಸಿದರು.
ಬರಹ : ಡಿ.ಐ. ಅಬೂಬಕರ್ ಕೈರಂಗಳ

