ಜನತಾ ದಳ (ಜಾತ್ಯಾತೀತ) ಪಕ್ಷದ ವಿಸ್ತರಣೆ ಹಾಗೂ ಯುವಜನರನ್ನು ಪಕ್ಷದತ್ತ ಆಕರ್ಷಿಸುವ ಉದ್ದೇಶದಿಂದ ಇಂದು ಬೆಂಗಳೂರಿನ ಜೆಡಿಎಸ್ ರಾಜ್ಯ ಕಚೇರಿಯಲ್ಲಿ ಮಹತ್ವದ ಸೇರ್ಪಡೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ಸುಳ್ಯದ ಪ್ರತಿಷ್ಠಿತ ಕೆದಂಬಾಡಿ ಕುಟುಂಬಕ್ಕೆ ಸೇರಿದ ಡಾ. ಆರ್ಥಿಕ್ ಕೆದಂಬಾಡಿ ಅವರು, ಪ್ರಸ್ತುತ ಎಂ.ಬಿ.ಎ ವಿದ್ಯಾರ್ಥಿಯಾಗಿದ್ದು, ಅಧಿಕೃತವಾಗಿ ಜನತಾ ದಳ (ಜಾತ್ಯಾತೀತ) ಪಕ್ಷಕ್ಕೆ ಸೇರ್ಪಡೆಗೊಂಡರು. ದಕ್ಷಿಣ ಕನ್ನಡ ಜಿಲ್ಲಾ ವಿದ್ಯಾರ್ಥಿ ಜನತಾ ದಳದ ಅಧ್ಯಕ್ಷರಾದ ನಿಹಾಲ್ ಎಸ್ ಕೋಡ್ತುಗುಳಿ ಅವರ ಪ್ರಯತ್ನದ ಫಲವಾಗಿ ಈ ಸೇರ್ಪಡೆ ನೆರವೇರಿತು.
ಸೇರ್ಪಡೆ ನಂತರ ಮಾತನಾಡಿದ ಡಾ. ಆರ್ಥಿಕ್ ಕೆದಂಬಾಡಿ ಅವರು, ಜೆಡಿಎಸ್ ಪಕ್ಷದ ಜನಪರ ಧೋರಣೆಗಳು, ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಯುವಜನರ ಹಿತಾಸಕ್ತಿಗಳನ್ನು ಕಾಪಾಡುವ ನಿಲುವುಗಳು ತಮಗೆ ಪ್ರೇರಣೆಯಾಗಿವೆ ಎಂದು ಹೇಳಿದರು. ಸಮಾಜಮುಖಿ ರಾಜಕೀಯದ ಮೂಲಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುವ ಸಂಕಲ್ಪದಿಂದ ಪಕ್ಷವನ್ನು ಸೇರಿದ್ದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ನಿಹಾಲ್ ಎಸ್ ಕೋಡ್ತುಗುಳಿ ಅವರು ಮಾತನಾಡಿ, ಆರ್ಥಿಕ್ ಅವರಂತಹ ವಿದ್ಯಾವಂತ, ಚಿಂತನೆ ಹೊಂದಿದ ಯುವಕರು ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಸಂತಸದ ಸಂಗತಿ. ಇಂತಹ ಯುವಶಕ್ತಿಯು ಪಕ್ಷದ ಭವಿಷ್ಯವನ್ನು ಇನ್ನಷ್ಟು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಜಾಕೆ ಮಾದವ ಗೌಡ, ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ, ಜಿಲ್ಲಾ ಕಾರ್ಯಾಧ್ಯಕ್ಷ ಶಶಿರಾಜ್ ಶೆಟ್ಟಿ ಕೊಳಂಬೆ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಶೆಟ್ಟಿ ಜಪ್ಪು, ಸುಳ್ಯ ತಾಲೂಕು ಅಧ್ಯಕ್ಷ ಸುಕುಮಾರ್ ಕೊಡ್ತುಗುಳಿ ಹಾಗೂ ಸುಳ್ಯ ತಾಲೂಕು ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ವಿದ್ಯಾರ್ಥಿ ಜನತಾದಳ ಮಹಾ ಪ್ರಧಾನ ಕಾರ್ಯದರ್ಶಿ ಅಂಜನ್ ಗೌಡ ಮೂರ್ಜೆ, ಉಪಸ್ಥಿತರಿದ್ದು, ಹೊಸ ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು.

