14ನೇ ವರ್ಷದ ನುಡಿಹಬ್ಬ – ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ ಪ್ರದಾನ
‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ–ಮಂಥನ ಮತ್ತು ಪ್ರದರ್ಶನ ವೇದಿಕೆಯ ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯದ ಡಾ. ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷಭಾರತಿ ಪುತ್ತೂರು ಇವರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮದ ಅಂಗವಾಗಿ 14ನೇ ವರ್ಷದ ನುಡಿಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ–2026’ ಕಾರ್ಯಕ್ರಮವನ್ನು ನವೆಂಬರ್ 22ರಿಂದ 28ರವರೆಗೆ ಮಂಗಳೂರಿನ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಆಯೋಜಿಸಲಾಗಿದೆ.
‘ಸಂಘಟನಾ ಪರ್ವ’ ಎಂಬ ವಿಶೇಷ ಪರಿಕಲ್ಪನೆಯಡಿ ಜಿಲ್ಲೆಯ ವಿವಿಧ ಯಕ್ಷಗಾನ ಸಂಘಗಳ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ.
ಏಳು ದಿನಗಳ ತಾಳಮದ್ದಳೆ ಕಾರ್ಯಕ್ರಮ
ನವೆಂಬರ್ 22: ಮಧ್ಯಾಹ್ನ 2 ಗಂಟೆಗೆ ಉದ್ಯಮಿ ಎ.ಕೆ. ಜಯರಾಮ ಶೆಟ್ಟಿಯವರಿಂದ ದೀಪ ಪ್ರಜ್ವಲನೆಯ ಮೂಲಕ ಸಪ್ತಾಹಕ್ಕೆ ಚಾಲನೆ ದೊರೆಯಲಿದೆ. ಬಳಿಕ ‘ಬಂಗಾರ್ದ ಉರೆ’ ತುಳು ತಾಳಮದ್ದಳೆ ನಡೆಯಲಿದೆ. ಸಂಜೆ 5.30ಕ್ಕೆ ಶ್ರೀ ಕಾಳಿಕಾಂಬ ಯಕ್ಷಕಲಾ ಪ್ರತಿಷ್ಠಾನ (ರಿ.), ಉಪ್ಪಿನಂಗಡಿ ಇವರಿಂದ ‘ಚಂದ್ರವಂಶೋದಯ’ ಯಕ್ಷಗಾನ ತಾಳಮದ್ದಳೆ ಪ್ರದರ್ಶನಗೊಳ್ಳಲಿದೆ.
ನವೆಂಬರ್ 23ರಿಂದ 28ರವರೆಗೆ: ಪ್ರತಿದಿನ ಸಂಜೆ 4 ಗಂಟೆಗೆ ವಿವಿಧ ಯಕ್ಷಗಾನ ಸಂಘಗಳ ಸಹಯೋಗದಲ್ಲಿ ತಾಳಮದ್ದಳೆ ಕಾರ್ಯಕ್ರಮಗಳು ನಡೆಯಲಿವೆ.
- ನವೆಂಬರ್ 23: ಹವ್ಯಾಸಿ ಬಳಗ ಕದ್ರಿ – ‘ರಾಜಾ ಸೌದಾಸ’
- ನವೆಂಬರ್ 24: ಶ್ರೀ ವಾಣಿ ವಿಲಾಸ ಯಕ್ಷಗಾನ ಬಳಗ, ಶಿರಂಕಲ್ಲು, ಕಟೀಲು – ‘ಭಾರ್ಗವ ರಾಮ’
- ನವೆಂಬರ್ 25: ಅಂಬುರುಹ ಯಕ್ಷಸದನ ಪ್ರತಿಷ್ಠಾನ, ಬೊಟ್ಟಿಕೆರೆ – ‘ವಿಷ್ಣು ಮಾಯೆ’
- ನವೆಂಬರ್ 26: ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ, ಕೂಡ್ಲು, ಕಾಸರಗೋಡು – ‘ಶಲ್ಯ ಸಾರಥ್ಯ’
- ನವೆಂಬರ್ 27: ಶ್ರೀ ಸುಬ್ರಹ್ಮಣ್ಯ ಯಕ್ಷ ಬಳಗ, ಸೂಡ – ‘ದಾನಕೋಟಿ ದಾಮಾಜಿ’ (ತುಳು)
- ನವೆಂಬರ್ 28: ಕರ್ನಾಟಕ ಯಕ್ಷಭಾರತಿ (ರಿ.), ಪುತ್ತೂರು – ‘ರಾಜಾ ಯಯಾತಿ’
ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ ಪ್ರದಾನ
ಯಕ್ಷಗಾನದ 14ನೇ ವರ್ಷದ ತಾಳಮದ್ದಳೆ ಸಪ್ತಾಹದ ಉದ್ಘಾಟನಾ ಸಮಾರಂಭವು ನವೆಂಬರ್ 22ರ ಭಾನುವಾರ ಸಂಜೆ 4.30ಕ್ಕೆ ನಡೆಯಲಿದೆ. ಡಾ. ಎ.ಜೆ. ಶೆಟ್ಟಿ ಗೌರವಾಧ್ಯಕ್ಷತೆ ವಹಿಸಲಿದ್ದು, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ.ಎಲ್. ಧರ್ಮ ಸಪ್ತಾಹವನ್ನು ಉದ್ಘಾಟಿಸಲಿದ್ದಾರೆ.
ಈ ಸಂದರ್ಭದಲ್ಲಿ ಮುಂಬೈನ ಪ್ರಸಿದ್ಧ ಉದ್ಯಮಿ, ಕಲಾಪೋಷಕ ಹಾಗೂ ಬಜಪೆ ಬಂಟರ ಸಂಘದ ಅಧ್ಯಕ್ಷ ವೇಣುಗೋಪಾಲ ಎಲ್. ಶೆಟ್ಟಿ ಥಾಣೆ ಅವರಿಗೆ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ಪ್ರದಾನ ಮಾಡಲಾಗುವುದು. ಭಾರತೀಯ ಸೇನೆಯ ನಿವೃತ್ತ ಸೇನಾನಿ ಕ್ಯಾಪ್ಟನ್ ಶರತ್ ಭಂಡಾರಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಿವಿಧ ಕ್ಷೇತ್ರಗಳ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಯಕ್ಷಾಂಗಣ ಗೌರವ ಪ್ರಶಸ್ತಿ–2026
ನವೆಂಬರ್ 28ರ ಶನಿವಾರ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅಹಮದ್ನಗರದ ಉದ್ಯಮಿ ಹಾಗೂ ಮುಂಡಪಳ್ಳಿಯ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಕೆ. ಶೆಟ್ಟಿ ವಹಿಸಲಿದ್ದಾರೆ. ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ದೀಪ ಪ್ರಜ್ವಲನೆ ಮಾಡಲಿದ್ದಾರೆ.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅವರು ಬಹುಶ್ರುತ ವಿದ್ವಾಂಸ ಹಾಗೂ ಬಹುಭಾಷಾ ಪ್ರವಚನಕಾರ ಡಾ. ಡಿ. ಸದಾಶಿವ ಭಟ್ ಪಳ್ಳು (94) ಅವರಿಗೆ 2026ನೇ ಸಾಲಿನ ‘ಯಕ್ಷಾಂಗಣ ಗೌರವ ಪ್ರಶಸ್ತಿ’ ಪ್ರದಾನ ಮಾಡಲಿದ್ದಾರೆ.
14ನೇ ವರ್ಷದ ನುಡಿಹಬ್ಬ – ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ ಪ್ರದಾನ
ಹಿರಿಯ ಯಕ್ಷಗಾನ ಸಾಧಕರಿಗೆ ಸಂಸ್ಮರಣೆ ಮತ್ತು ಸಮ್ಮಾನ
ಸಪ್ತಾಹದ ಏಳು ದಿನಗಳಲ್ಲಿಯೂ ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಹಿರಿಯ ಚೇತನಗಳಾದ ಕೀರ್ತಿಶೇಷ ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ, ಪಳ್ಳಿ ರಮಾನಾಥ ಹೆಗ್ಡೆ, ವಿದ್ವಾನ್ ಕೆ. ಕಾಂತ ರೈ ಮೂಡುಬಿದಿರೆ, ಎ.ಕೆ. ನಾರಾಯಣ ಶೆಟ್ಟಿ, ಎ.ಕೆ. ಮಹಾಬಲ ಶೆಟ್ಟಿ ಫರಂಗಿಪೇಟೆ, ಕೆ. ಗೋವಿಂದ ಭಟ್ ಸೂರಿಕುಮೇರು ಹಾಗೂ ಶಂಭು ಶರ್ಮ ವಿಟ್ಲ ಅವರ ಸಂಸ್ಮರಣೆ ನಡೆಯಲಿದೆ.
ಇದಲ್ಲದೆ, ಹಿರಿಯ ಯಕ್ಷಗಾನ ಕಲಾವಿದ ಹಾಗೂ ಪ್ರಸಂಗಕರ್ತ ಡಾ. ತಾರಾನಾಥ ವರ್ಕಾಡಿ ಅವರಿಗೆ ಹಾಸ್ಯಪಟು ದಿ. ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಸ್ಮೃತಿ ಗೌರವ ನೀಡಿ ಸಮ್ಮಾನಿಸಲಾಗುವುದು.
ಸಪ್ತಾಹದ ಎಲ್ಲ ಕಾರ್ಯಕ್ರಮಗಳಿಗೂ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ.
ಭಾಸ್ಕರ ರೈ ಕುಕ್ಕುವಳ್ಳಿ
ಕಾರ್ಯಾಧ್ಯಕ್ಷರು,
ಯಕ್ಷಾಂಗಣ ಮಂಗಳೂರು.
ಉಪಸ್ಥಿತರಿದ್ದವರು:
- ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ – ಉಪಾಧ್ಯಕ್ಷರು
- ರವೀಂದ್ರ ರೈ ಕಲ್ಲಿಮಾರು – ಪ್ರಧಾನ ಸಂಚಾಲಕರು
- ತೋನ್ಸೆ ಪುಷ್ಕಳ ಕುಮಾರ್ – ಪ್ರಧಾನ ಕಾರ್ಯದರ್ಶಿ
- ಕೆ. ಲಕ್ಷ್ಮೀನಾರಾಯಣ ರೈ ಹರೇಕಳ – ಕಾರ್ಯದರ್ಶಿ
- ಸುಮಾ ಪ್ರಸಾದ್ – ಕಾರ್ಯದರ್ಶಿ

