ಕ್ರೀಡಾ ಸಾಧನೆಯೊಂದಿಗೆ ಸಮಾಜಸೇವೆಯಲ್ಲೂ ಮಾದರಿ ವ್ಯಕ್ತಿತ್ವ – ಯುವ ಕ್ರೀಡಾಪಟುಗಳಿಗೆ ಹೊಸ ಭರವಸೆ
ಬಂಟ್ವಾಳ: ಕ್ರೀಡಾ ಕ್ಷೇತ್ರದ ಸಂಘಟನಾ ಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ದೇಹದಾರ್ಡ್ಯ ಸಂಸ್ಥೆಯ ನೂತನ ಕಾರ್ಯಾಧ್ಯಕ್ಷರಾಗಿ ಕ್ರೀಡಾ ಸಂಘಟಕ ಹಾಗೂ ಸಮಾಜಸೇವಕ ಅರುಣ್ ಕುಮಾರ್ ಗಟ್ಟಿ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ದೇಹದಾರ್ಡ್ಯ ಕ್ರೀಡೆಯನ್ನು ಕೇವಲ ಸ್ಪರ್ಧೆ ಮತ್ತು ಪ್ರಶಸ್ತಿಗಳಿಗೆ ಸೀಮಿತಗೊಳಿಸದೆ, ಯುವಜನರ ಶಿಸ್ತು, ಆರೋಗ್ಯ ಹಾಗೂ ವ್ಯಕ್ತಿತ್ವ ವಿಕಸನದ ವೇದಿಕೆಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಶ್ರಮಿಸುತ್ತಿರುವ ಅರುಣ್ ಕುಮಾರ್ ಗಟ್ಟಿ ಅವರು ಜಿಲ್ಲೆಯ ಕ್ರೀಡಾ ವಲಯದಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿದ್ದಾರೆ.
ಕೋಟೆಕಾರ್ನಲ್ಲಿ ‘ಗಟ್ಟಿಸ್ ಜಿಮ್’ ನಡೆಸುತ್ತಿರುವ ಅವರು, ಅನೇಕ ಯುವಕರಿಗೆ ದೇಹದಾರ್ಡ್ಯ ತರಬೇತಿ ನೀಡುವುದರೊಂದಿಗೆ ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದ ಹಲವಾರು ಪ್ರತಿಷ್ಠಿತ ದೇಹದಾರ್ಡ್ಯ ಸ್ಪರ್ಧೆಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದಾರೆ. ಅವರ ಸಂಘಟನಾ ಚಾತುರ್ಯ, ಕ್ರೀಡೆಯ ಮೇಲಿನ ಬದ್ಧತೆ ಹಾಗೂ ಕ್ರೀಡಾಪಟುಗಳಿಗೆ ನೀಡುತ್ತಿರುವ ಪ್ರೋತ್ಸಾಹ ಗಮನಾರ್ಹವಾಗಿದೆ.
ಸ್ಪರ್ಧೆಗಳ ಮೂಲಕ ಸಂಗ್ರಹವಾದ ಹಣ ಸಮಾಜದ ಒಳಿತಿಗೆ!
ಅರುಣ್ ಕುಮಾರ್ ಗಟ್ಟಿ ಅವರ ಸೇವಾ ಮನೋಭಾವದ ವಿಶೇಷತೆ ಎಂದರೆ, ದೇಹದಾರ್ಡ್ಯ ಸ್ಪರ್ಧೆಗಳ ಆಯೋಜನೆಯಿಂದ ಉಳಿಕೆಯಾಗುವ ಹಣವನ್ನು ವೈಯಕ್ತಿಕ ಲಾಭಕ್ಕೆ ಬಳಸದೆ, ಸಮಾಜದ ಅಗತ್ಯಗಳಿಗೆ ವಿನಿಯೋಗಿಸುತ್ತಿರುವುದು. ಸರ್ಕಾರಿ ಶಾಲೆಗಳ ಅಭಿವೃದ್ಧಿ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರವು ಹಾಗೂ ನಿರ್ಗತಿಕ ಮಕ್ಕಳ ಶಿಕ್ಷಣಕ್ಕೆ ಧನಸಹಾಯ ನೀಡುವ ಮೂಲಕ ಕ್ರೀಡೆಯ ಜೊತೆಗೆ ಮಾನವೀಯ ಸೇವೆಯಲ್ಲೂ ತಮ್ಮದೇ ಆದ ಮಾದರಿ ನಿರ್ಮಿಸಿದ್ದಾರೆ.
ಕ್ರೀಡಾಪಟುಗಳನ್ನು ಬೆಳೆಸುವುದಷ್ಟೇ ಅಲ್ಲದೆ, ಅವರ ಪ್ರತಿಭೆಗೆ ವೇದಿಕೆ ಕಲ್ಪಿಸುವುದು, ಯುವಕರಿಗೆ ಪ್ರೋತ್ಸಾಹ ನೀಡುವುದು ಮತ್ತು ಸಮಾಜದ ದುರ್ಬಲ ವರ್ಗಗಳಿಗೆ ನೆರವಾಗುವುದು ಅವರ ಕಾರ್ಯಚಟುವಟಿಕೆಗಳ ಪ್ರಮುಖ ಆಶಯವಾಗಿದೆ.
ಕ್ರೀಡಾ ಸಂಘಟನೆ, ಸಾಮಾಜಿಕ ಸೇವೆ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಅವರ ಅನುಭವ ಮತ್ತು ಸೇವಾ ಬದ್ಧತೆಯನ್ನು ಗುರುತಿಸಿ ಜಿಲ್ಲಾ ದೇಹದಾರ್ಡ್ಯ ಸಂಸ್ಥೆಯ ಕಾರ್ಯಾಧ್ಯಕ್ಷರ ಮಹತ್ವದ ಜವಾಬ್ದಾರಿಯನ್ನು ವಹಿಸಲಾಗಿದೆ.
ಅವರ ಆಯ್ಕೆಗೆ ಜಿಲ್ಲೆಯ ಕ್ರೀಡಾಪಟುಗಳು, ದೇಹದಾರ್ಡ್ಯ ಸಂಘಟಕರು ಹಾಗೂ ಕ್ರೀಡಾಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು, ಅವರ ಸಮರ್ಥ ನಾಯಕತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೇಹದಾರ್ಡ್ಯ ಕ್ರೀಡೆಗೆ ಹೊಸ ಆಯಾಮ ದೊರೆಯಲಿದೆ, ಪ್ರತಿಭಾವಂತ ಕ್ರೀಡಾಪಟುಗಳಿಗೆ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗಲಿವೆ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

