ಉಡುಪಿ, ಏಪ್ರಿಲ್ 24:ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಗ್ರಾಮ ಸಹಾಯಕನೊಬ್ಬರು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವ ಘಟನೆ ಸಾರ್ವಜನಿಕರಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಮೃತರನ್ನು ಸದಾನಂದ ಎಂದು ಗುರುತಿಸಲಾಗಿದೆ.


ಮಾಹಿತಿಯ ಪ್ರಕಾರ, ಮಾವಿನ ಹಣ್ಣು ತೆಗೆಯಲು ಮರಕ್ಕೆ ಹತ್ತಿದ ವೇಳೆ ಸಮೀಪದಲ್ಲಿದ್ದ ವಿದ್ಯುತ್ ತಂತಿಗೆ ಸ್ಪರ್ಶವಾದ ಪರಿಣಾಮ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಸಾರ್ವಜನಿಕ ಸ್ಥಳದಲ್ಲೇ ಈ ರೀತಿಯ ಅಪಾಯಕಾರಿ ಪರಿಸ್ಥಿತಿ ಉಂಟಾಗಿರುವುದು ಭದ್ರತಾ ಕ್ರಮಗಳ ಗಂಭೀರ ಕೊರತೆಯನ್ನು ಬೆಳಕಿಗೆ ತಂದಿದೆ.


ಈ ಘಟನೆಗೆ ಸಂಬಂಧಿಸಿ ತುಳುನಾಡ ರಕ್ಷಣಾ ವೇದಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮೂಲಭೂತ ಭದ್ರತಾ ವ್ಯವಸ್ಥೆಗಳನ್ನು ಖಚಿತಪಡಿಸದೇ ಇರುವುದರಿಂದ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲ್ಲಿ ವೇದಿಕೆಯ ಪದಾಧಿಕಾರಿಗಳು ಇಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಘಟನೆ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಜೊತೆಗೆ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಎಲ್ಲಾ ಸರ್ಕಾರಿ ಆವರಣಗಳಲ್ಲಿ ವಿದ್ಯುತ್ ಭದ್ರತಾ ಕ್ರಮಗಳನ್ನು ತಕ್ಷಣ ಜಾರಿಗೊಳಿಸುವಂತೆ ಮನವಿ ಸಲ್ಲಿಸಿದರು.
ಮೃತರ ಕುಟುಂಬಕ್ಕೆ ತಕ್ಷಣ ಸಮರ್ಪಕ ಪರಿಹಾರ ಒದಗಿಸಬೇಕು. ಸರ್ಕಾರದಿಂದ ಆರ್ಥಿಕ ನೆರವು, ಕುಟುಂಬದ ಸದಸ್ಯರಿಗೆ ಉದ್ಯೋಗಾವಕಾಶ ಸೇರಿದಂತೆ ಮಾನವೀಯ ಸಹಾಯಗಳನ್ನು ನೀಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ, ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಜಯ ಪೂಜಾರಿ (ಲಕ್ಷ್ಮೀನಗರ), ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಹಾಗೂ ಮುಖಂಡರಾದ ಮಮತಾ ಎನ್. ಶಂಕರ್, ಗುಣಾಕರ್ ಬೈರಂಪಳ್ಳಿ, ಸುಧೀಪ್ ಬೆಳ್ಳಾರ್ಪಾಡಿ, ಸಾಥ್ವಿಕ್ ಬೆಳ್ಳಾರ್ಪಾಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

